ಮಂಗಳೂರು: ಹೆಚ್ಚುತ್ತಿರುವ ಕೋವಿಡ್, ದ.ಕ ಜಿಲ್ಲೆಯಲ್ಲಿ ಆ.14 ಮತ್ತು15 ರಂದು ವಾರಾಂತ್ಯ ಕರ್ಫ್ಯೂ
ಮಂಗಳೂರು,(ಉಡುಪಿ ಟೈಮ್ಸ್ ವರದಿ) ಆ.13: ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ ದ.ಕ ಜಿಲ್ಲೆಯಲ್ಲಿ ಆ.14 ಮತ್ತು 15 ರಂದು ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ. ಈ ಬಗ್ಗೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದು, ಕೇರಳದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಾಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕಳೆದ ವಾರ ವಿಧಿಸಿದಂತೆ ಈ ವಾರಾಂತ್ಯವೂ (ಆ.14,15) ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಅದರಂತೆ ಇಂದು (ಆ.13) ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5 ರವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಈ ಎರಡೂ ದಿನಗಳಲ್ಲಿ ಮಧ್ಯಾಹ್ನ 2 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಈ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಬಳಿಕ ಅನಗತ್ಯವಾಗಿ ತಿರುಗಾಡಬಾರದು ಎಂದು ತಿಳಿಸಿದ್ದಾರೆ.
ವಾರಾಂತ್ಯ ಕರ್ಪ್ಯೂ ವೇಳೆ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಲ್ಲದೆ ಶನಿವಾರ ನಡೆಸಲು ಉದ್ದೇಶಿಸಲಾಗಿದ್ದ ಮಂಗಳೂರು ವಿವಿ ಪದವಿ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ. ರವಿವಾರ ಸ್ವಾತಂತ್ರೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ವಾರಾಂತ್ಯ ಕರ್ಪ್ಯೂ ಹಿನ್ನೆಲೆಯಲ್ಲಿ ಮೆಗಾ ಲೋಕ್ ಅದಾಲತ್‌ಗೆ ಹಾಜರಾಗುವವರಿಗೆ ವಿನಾಯಿತಿ ನೀಡುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಕೋರಿಕೆಯಂತೆ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ವಿನಾಯಿತಿ ನೀಡಲಾಗಿದೆ. ಪಕ್ಷಕಾರರು, ದಾವೆದಾರರು ಅಧಿಕೃತ ಗುರುತಿನ ಚೀಟಿ ಹೊಂದಿಕೊಂಡವರಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಕೇರಳದಿಂದ ಮೆಗಾ ಲೋಕ್ ಅದಾಲತ್ ಉದ್ದೇಶಕ್ಕೆ ಹಾಜರಾಗುವ ಪಕ್ಷಕಾರರು, ದಾವಾದಾರರು ಕೋವಿಡ್ ಲಸಿಕೆ ಪಡೆದಿದ್ದರೂ (2 ಡೋಸ್ ಆಗಿದ್ದರೂ) ಆರ್‌ಟಿ ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹಾಜರುಪಡಿಸಿದ ನಂತರವೇ ಪ್ರವೇಶಿಸಲು ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.