ಉಡುಪಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಉಡುಪಿ ಆ.13 : ಅಪ್ರಾಪ್ತೆಯ ಅತ್ಯಾಚಾರ ವೆಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಂಕರ್(30) ಪ್ರಕರಣದ ಆರೋಪಿ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆ ಆರೋಪಿತ ವ್ಯಕ್ತಿ‌ ಅಪರಾಧಿಯೆಂದು ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ಮಹತ್ವದ ತೀರ್ಪು ನೀಡಿದ್ದಾರೆ.

ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ, 15 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 1 ವರ್ಷ ಸಾದಾ ಶಿಕ್ಷೆ, ಕೊಲೆ ಬೆದರಿಕೆ ಹಾಕಿದ್ದಕ್ಕೆ 3 ವರ್ಷ ಜೈಲು, 5 ಸಾವಿರ ದಂಡ ವಿಧಿಸಲಾಗಿದೆ. ಒಂದು ವೇಳೆ ಆರೋಪಿ ದಂಡ ತೆರದಿದ್ದರೆ 6 ತಿಂಗಳು ಸಾದಾ ಸಜೆಗೆ ಆದೇಶಿಸಲಾಗಿದೆ. ಇದರೊಂದಿಗೆ ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ಪರಿಹಾರ ನೀಡಲು ಮತ್ತು ದಂಡದ ಹಣದಲ್ಲಿ ಸಂತ್ರಸ್ತೆಗೆ 15 ಸಾವಿರ ಹಾಗೂ 5 ಸಾವಿರ ಸರಕಾರಕ್ಕೆ ನೀಡಲು ಉಡುಪಿ‌ ಫೋಕ್ಸೋ ಕೋರ್ಟ್ ತೀರ್ಪು ನೀಡಿದೆ.

2018 ರಲ್ಲಿ ಕಾರ್ಕಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತ ಬಾಲಕಿ ಮನೆಗೆ ಬಂದ ಶಂಕರ್ ಅತ್ಯಾಚಾರವೆಸಗಿದ್ದು ಆಕೆ ಗರ್ಭವತಿಯಾಗಿದ್ದಳು. ಈ ಬಗ್ಗೆ ತಿಳಿದ ಆಕೆ ಪೋಷಕರು ಸಂಬಂದಪಟ್ಟ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಅಂದಿನ ಕಾರ್ಕಳ ವೃತ್ತನಿರೀಕ್ಷಕ ಜಾಯ್ ಅಂತೋನಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ 21 ಸಾಕ್ಷಿಗಳ ಪೈಕಿ 11 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದು ಡಿ.ಎನ್.ಎ ವರದಿ ಹಾಗೂ ಸಂತ್ರಸ್ತ ಬಾಲಕಿ‌ ಸಹಿತ ವಿವಿಧ ಸಾಕ್ಷ್ಯಗಳು ಅಭಿಯೋಜನೆಗೆ ಪೂರಕವಾಗಿದ್ದರಿಂದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಈ ತೀರ್ಪು‌ ಪ್ರಕಟಿಸಿದೆ.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!