ಕಾಂಗ್ರೆಸ್ ಆತ್ಮಾವಲೋಕನ ಮಾಡದೆ ಆರು ವರ್ಷವಾಯ್ತು- ಹಿರಿಯ ಕಾಂಗ್ರೆಸ್ಸಿಗ ಕಪಿಲ್ ಸಿಬಲ್ ಕಿಡಿ
ನವದೆಹಲಿ( ಉಡುಪಿ ಟೈಮ್ಸ್ ವರದಿ): ಆತ್ಮಾವಲೋಕನ ಮಾಡದೆ ಆರು ವರ್ಷವಾಯ್ತು ಇದು ಆತ್ಮಾವಲೋಕನದ ಸಮಯ, ಕಾಂಗ್ರೆಸ್ ನಾಯಕರು ಪಕ್ಷವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ಸಿಗ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರು ಕಾಂಗ್ರೆಸ್ ಅನ್ನು ಪರಿಣಾಮಕಾರಿ ಪರ್ಯಾಯವಾಗಿ ಪರಿಗಣಿಸುತ್ತಿಲ್ಲ ಎನ್ನುವುದಕ್ಕೆ ಬಿಹಾರ ವಿಧಾನಸಭೆ ಚುನಾವಣೆ ಮತ್ತು ಉಪ ಚುನಾವಣೆಗಳಲ್ಲಿನ ಕಾಂಗ್ರೆಸ್ನ ಕಳಪೆ ಪ್ರದರ್ಶನವೇ ಸಾಕ್ಷಿ ಎಂದು ಅವರು ಕಿಡಿಕಾರಿದ್ದಾರೆ. ಪಕ್ಷದ ನಾಯಕತ್ವ ಮತ್ತು ರಚನೆಯಲ್ಲಿ ಆಮೂಲಾಗ್ರ ಬದಲಾವಣೆಗಳು ಆಗಬೇಕು ಎಂದು ಕೆಲವು ತಿಂಗಳ ಹಿಂದೆ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ 23 ಮುಖಂಡರಲ್ಲಿ ಒಬ್ಬರಾಗಿದ್ದ ಕಪಿಲ್ ಸಿಬಲ್, ಪಕ್ಷದ ನಾಯಕತ್ವ ವೈಫಲ್ಯದ ಬಗ್ಗೆ ಅನೇಕ ಬಾರಿ ಬಹಿರಂಗವಾಗಿ ಧ್ವನಿ ಎತ್ತಿದ್ದರು.
ಪಕ್ಷದಲ್ಲಿನ ಸಮಸ್ಯೆಗಳು ಹೆಚ್ಚುತ್ತಿವೆ ಎನ್ನುವುದು ಕಾಂಗ್ರೆಸ್ಗೆ ಚೆನ್ನಾಗಿ ತಿಳಿದಿದೆ, ಅವುಗಳಿಗೆ ಉತ್ತರವೂ ಗೊತ್ತಿದೆ. ಆದರೆ ಅವುಗಳನ್ನು ಗುರುತಿಸುವ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಸಿಬಲ್ ಹೇಳಿದ್ದಾರೆ.
ನಮಗೆ ಬೆನ್ನು ತೋರಿಸಿದರು ‘ನಾವು ಕೆಲವು ಮಂದಿ ನಮ್ಮ ಅಭಿಪ್ರಾಯಗಳನ್ನು ಪೆನ್ನಿನಿಂದ ಕಾಗದದ ಮೇಲೆ ಇಳಿಸಿದ್ದೆವು. ಮುಂದಿನ ಹಾದಿಯಲ್ಲಿ ಕಾಂಗ್ರೆಸ್ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದೆವು. ಆದರೆ ನಮ್ಮನ್ನು ಆಲಿಸುವ ಬದಲು ನಮ್ಮೆಡೆಗೆ ಬೆನ್ನು ತೋರಿಸಿದರು. ಅದರ ಫಲಿತಾಂಶವನ್ನು ನೀವು ನೋಡುತ್ತಿದ್ದೀರಿ. ದೇಶದ ಜನರು, ಬಿಹಾರ ಮಾತ್ರವಲ್ಲ ಆದರೆ ಉಪ ಚುನಾವಣೆ ನಡೆದ ಕಡೆಗಳಲ್ಲೆಲ್ಲ ಕಾಂಗ್ರೆಸ್ ಅನ್ನು ಪರಿಣಾಮಕಾರಿ ಪರ್ಯಾಯ ಪಕ್ಷ ಎಂದು ಪರಿಗಣಿಸದೆ ಇರುವುದು ಸ್ಪಷ್ಟವಾಗಿದೆ’ ಎಂದಿದ್ದಾರೆ.
ಎಂದಿರುವ ಸಿಬಲ್, ”ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯನಾಗಿರುವ ನನ್ನ ಸಹೋದ್ಯೋಗಿಯೊಬ್ಬರು ಒಂದು ದಿನ, ‘ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂಬ ಭರವಸೆ ಇದೆ’ ಎಂದು ಹೇಳಿದ್ದರು. ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳದೆ ಆರು ವರ್ಷಗಳಾದವು. ಈಗ ಆತ್ಮಾವಲೋಕನ ಮಾಡಿಕೊಳ್ಳುವ ಭರವಸೆ ಎಲ್ಲಿಂದ ಬರಬೇಕು? ಕಾಂಗ್ರೆಸ್ನಲ್ಲಿರುವ ಸಮಸ್ಯೆ ಏನೆಂದು ನಮಗೆ ಗೊತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗುಜರಾತ್ನಲ್ಲಿ ಎಲ್ಲ ಎಂಟು ಸ್ಥಾನಗಳಲ್ಲಿ ಸೋತಿದೆ. ಅವರಲ್ಲಿ ಮೂವರು ಅಭ್ಯರ್ಥಿಗಳ ಠೇವಣಿ ಕೂಡ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದ ಏಳು ಕ್ಷೇತ್ರಗಳ ಪೈಕಿ ಕೆಲವು ಕಡೆ ಶೇ 2ಕ್ಕಿಂತಲೂ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿಯೂ ಇದುವರೆಗೂ ಅಧಿಕಾರದಲ್ಲಿದ್ದ ಕಾಂಗ್ರೆಸ್ 28 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದೆ ಎಂದು ಅವರು ಹೇಳಿದ್ದಾರೆ