ಮುಖ್ಯಮಂತ್ರಿಗಳನ್ನು ಎಚ್ ಡಿ ಕೆ ಹಗಲು ಹಾಗೂ ಡಿ.ಕೆ.ಶಿ ರಾತ್ರಿ ವೇಳೆ ಭೇಟಿಯಾಗುತ್ತಾರೆ : ಯೋಗೀಶ್ವರ್ ಆರೋಪ
ಬೆಂಗಳೂರು, ಜು. 9: ಯಡಿಯೂರಪ್ಪನವರಿಗೆ ದುಂಬಾಲು ಬೀಳಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರು ಹಗಲು ಹೊತ್ತು ಹೋದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾತ್ರಿ ವೇಳೆ ಸಿಎಂ ಭೇಟಿಯಾಗುತ್ತಾರೆ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಬಿಡದಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪನವರ ಸಹಕಾರವಿಲ್ಲದಿದ್ದರೆ ಜೆಡಿಎಸ್ ಯಾವೊಬ್ಬ ಶಾಸಕರು ಆ ಪಕ್ಷದಲ್ಲಿ ಉಳಿಯುತ್ತಿರಲಿಲ್ಲ’ ರಾಜಕೀಯವಾಗಿ ನೆಲೆ ಕಳೆದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಿಕ್ಕಾಗಿಯೇ ಪದೇ ಪದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡುತ್ತಿದ್ದಾರೆ’ ನಾನು ರಾಮನಗರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಮರುದಿನವೇ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದರು. ಜೆಡಿಎಸ್ಗೆ ರಾಮನಗರ, ಮಂಡ್ಯ ಬಿಟ್ಟರೆ ಬೇರೆ ಎಲ್ಲೂ ಅಸ್ತಿತ್ವವಿಲ್ಲ. ಇವರಿಗೆ ತಾಕತ್ತು ಇದ್ದರೆ ಉತ್ತರ ಕರ್ನಾಟಕಕ್ಕೆ ಹೋಗಿ ಪಕ್ಷ ಕಟ್ಟಲಿ ನೋಡೋಣ’ ಎಂದು ಸವಾಲು ಹಾಕಿದ್ದಾರೆ.
ಇನ್ನು ನಾನು ಸಿಎಂ ಬದಲಾಗಬೇಕೆಂದು ಎಲ್ಲೂ ಹೇಳಿಲ್ಲ ಎಂದ ಅವರು, ನಾನು ಸಿಎಂ ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ಒಪ್ಪಿದ್ದೇನೆ. ಆದರೆ, ನನಗೆ ಆಗುತ್ತಿರುವ ಕಿರುಕುಳ ಹಾಗೂ ನೋವಿನ ಬಗ್ಗೆ ಹೇಳಿಕೊಂಡಿದ್ದೇನೆ. ನಿನ್ನೆ ತಾನೆ ನಮ್ಮ ನೆಚ್ಚಿನ ಪ್ರಧಾನಿ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದಾರೆ. ಇದು ಸಂತಸದ ವಿಷಯ. ನಮ್ಮ ಸಿಎಂ ಅವರೂ ಸಮರ್ಥರಾಗಿದ್ದು, ನಾನು ಅವರ ವಿರುದ್ಧವೆಂದು ಬಿಂಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ನಾನು ಬಿಜೆಪಿ ಸರಕಾರ ಹಾಗೂ ಪಕ್ಷದೊಳಗಿನ ಲೋಪದೋಷಗಳ ಬಗ್ಗೆ ಮತ್ತು ನನಗೆ ಆಗಿರುವ ನೋವುಗಳ ಬಗ್ಗೆ ಆಯಾ ಸಂದರ್ಭದಲ್ಲಿ ನನ್ನ ನಿಲುವನ್ನು ಪ್ರದರ್ಶಿಸಿದ್ದೇನೆ. ಅದಕ್ಕೆ ಬದ್ಧವಾಗಿರುತ್ತೇನೆ. ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಆಗಬೇಕಾದರೆ ನನ್ನ ಶ್ರಮವು ಇದೆ. ಅವರಿಗೆ ಸಪ್ತ ಸಚಿವರ ವಸತಿ ಗೃಹದಲ್ಲಿ ಕ್ವಾಟರ್ಸ್ ದೊರೆಯಲು ಹಾಗೂ ಹೊನ್ನಾಳ್ಳಿ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ.ಅನುದಾನ ಸಿಗಲು ನನ್ನ ಅಳಿಲು ಸೇವೆ ಇದೆ ಎಂಬುದನ್ನು ಅವರು ಮರೆಯಬಾರದು’ ಎಂದು ಯೋಗೇಶ್ವರ್ ತಿರುಗೇಟು ನೀಡಿದರು. ಈ ವೇಳೆ ನಾನು ಸಚಿವನಾಗಿದ್ದಾಗಲೇ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿದ್ದೇನೆ. 5 ಬಾರಿ ವಿವಿಧ ಚಿಹ್ನೆಗಳಡಿ ಸ್ಪರ್ಧಿಸಿ, ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ರಾಜೀನಾಮೆ ನೀಡಿ, ವಿಧಾನಸಭೆಗೆ ಆಯ್ಕೆಯಾಗಿ ಬನ್ನಿ ಎಂದು ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಇದೇ ವೇಳೆ ರೇಣುಕಾಚಾರ್ಯ ಬಗ್ಗೆ ನನಗೆ ಗೌರವವಿದೆ ಎಂದ ಅವರು, ನನ್ನ ಬಗ್ಗೆ 40 ಶಾಸಕರು ಹೈಕಮಾಂಡ್ಗೆ ದೂರು ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ವರಿಷ್ಠರಿಗೆ ಹೇಳಿದ್ದೇನೆ. ಮುಂದೆ ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿದರು.
ಕುಮಾರಸ್ವಾಮಿ ತಮ್ಮ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ.: ಇದೇ ವೇಳೆ ಸಂಸದೆ ಸುಮಲತಾ ಅವರ ವಿರುದ್ದ ಕುಮಾರ ಸ್ವಾಮಿ ಹೇಳಿಕೆ ವಿರುದ್ಧ ಪ್ರತಿಕ್ರಿಯೆ ನೀಡಿದ ಅವರು, ಸಂಸದೆ ಸುಮಲತಾ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದು ಸರಿಯಲ್ಲ, ಮಾಜಿ ಮುಖ್ಯಮಂತ್ರಿ ಘನತೆಗೆ ಅವರ ಮಾತುಗಳು ಶೋಭೆ ತರುವುದಿಲ್ಲ’ ಎಂದು ಟೀಕಿಸಿದರು.
ಕೆಆರ್ ಎಸ್ ಆಣೆಕಟ್ಟು ವ್ಯಾಪ್ತಿಯಲ್ಲಿನ 30 ಕಿ.ಮೀ ಆಸುಪಾಸಿನಲ್ಲಿ ಹಲವು ದಶಕಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುತ್ತಾರೆ. ಇದರಿಂದ ಕೆ ಆರ್ ಎಸ್ ಗೆ ಧಕ್ಕೆಯುಂಟಾಗಲಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿಯೂ ಬಂದಿವೆ. ಹೀಗಾಗಿ ಸಂಸದೆ ಸುಮಲತಾ ಅವರು ಕೆ ಆರ್ ಎಸ್ ಬಿರುಕು ಬೀಳುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕುಮಾರಸ್ವಾಮಿಯವರಿಗೆ ಬಿರುಕು ಬಿಡುವ ಸಾಧ್ಯತೆ ಇಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಲಿ. ಅದು ಬಿಟ್ಟು ಅವರನ್ನೇ ಅಣೆಕಟ್ಟು ಗೇಟಿಗೆ ಅಡ್ಡ ಮಲಗಿಸಬೇಕು ಎಂದು ನಿಂಧಿಸುವುದು ಸರಿಯಲ್ಲ. ಹೀಗಾಗಿಯೇ ಕುಮಾರಸ್ವಾಮಿ ತಮ್ಮ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರನ್ನು ವಿಜೃಂಭಿಸುವ ಅಗತ್ಯವಿಲ್ಲ. ಅವರು ತಮ್ಮ ಹಿಂದಿನ ಘನತೆ-ತೂಕ ಎರಡನ್ನೂ ಕಳೆದುಕೊಂಡಿದ್ದಾರೆ’ ಎಂದು ಯೋಗೇಶ್ವರ್ ವಾಗ್ದಾಳಿ ನಡೆಸಿದರು.