ಮರವಂತೆ: ಮತ್ತೊಂದು ದೋಣಿ ದುರಂತ
ಕುಂದಾಪುರ(ಉಡುಪಿ ಟೈಮ್ಸ್ ವರದಿ): ಉಪ್ಪುಂದದಲ್ಲಿ ದೋಣಿ ದುರಂತ ನಡೆದ ಘಟನೆ ಇನ್ನು ಮಾಸುವ ಮೊದಲೇ ಮರವಂತೆಯಲ್ಲಿ ಮತ್ತೊಂದು ದೋಣಿ ದುರಂತವಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ,ಮರವಂತೆ ಮಾರಸ್ವಾಮಿಯ ಗಂಗಾಧರೇಶ್ವರ ದೇವಸ್ಥಾನದ ಹತ್ತಿರ ಸಮುದ್ರದಲ್ಲಿ ಬುಧವಾರ ಮಧ್ಯಾಹ್ನ ಮೀನುಗಾರಿಕೆ ನಡೆಸುತ್ತಿದ್ದ ಒಂಟಿದೋಣಿ ಅಲೆಗಳಿಗೆ ಸಿಲುಕಿ ಮಗುಚಿಕೊಂಡಿದೆ.
ದೋಣಿಯಲ್ಲಿದ್ದ ನಾಲ್ವರು ಈಜಿ ಹತ್ತಿರದ ದೋಣಿಗಳನ್ನೇರಿ ಪಾರಾದರು. ಗಂಗೊಳ್ಳಿಯ ಗುಡ್ಡೆಕೇರಿ ಶ್ರೀನಿವಾಸ ಖಾರ್ವಿ ಅವರಿಗೆ ಸೇರಿದ ಆದಿ ಆಂಜನೇಯ ಹೆಸರಿನ ಎರಡು ಎಂಜಿನ್‌ಗಳ ದೋಣಿಯಲ್ಲಿ ಗಂಗೊಳ್ಳಿಯ ಸುಬ್ಬ ಖಾರ್ವಿ, ಮಗ ರಾಮ ಖಾರ್ವಿ, ಶೇಷ ಖಾರ್ವಿ ಅವರ ಮಗ ಶಂಕರ ಖಾರ್ವಿ, ನಾರಾಯಣ ಖಾರ್ವಿ ಅವರ ಮಗ ಕೃಷ್ಣ ಖಾರ್ವಿ ಮತ್ತು ಕುಂದಾಪುರ ಕೋಡಿಯ ಲಕ್ಷ್ಮಣ ಖಾರ್ವಿ ಅವರ ಮಗ ಸುಭಾಸ್ ಖಾರ್ವಿ ಬಲೆಬಿಟ್ಟು ಮೀನು ಹಿಡಿಯುತ್ತಿದ್ದಾಗ ಘಟನೆ ನಡೆದಿದೆ.
ದೋಣಿ ಒಡೆದು ನಿಷ್ಪ್ರಯೋಜಕ ಆಗಿದೆ. . ಒಟ್ಟು ರೂ 10 ಲಕ್ಷ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ದಡಕ್ಕೆ ತೇಲಿಬಂದ ದೋಣಿಯ ಅವಶೇಷವನ್ನು ಮೇಲೆತ್ತಲಾಗಿದೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಎಸ್ ಐ ಭೀಮಾಶಂಕರ ಎಸ್ ಮತ್ತು ಸಿಬ್ಬಂದಿಗಳು ಸರಳಕ್ಕೆ ಧಾವಿಸಿದ್ದಾರೆ.