ಸರಕಾರ ಘೋಷಿಸಿದ ಪರಿಹಾರ ಪಡೆಯಲು ನೂರಾರು ವಿಘ್ನ
ಬೆಂಗಳೂರು : ಸಂಕಷ್ಟದಲ್ಲಿರುವ ಜನರಿಗೆ ಸರಕಾರ ಘೋಷಿಸಿದ ಪರಿಹಾರ ಪಡೆಯುವಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ.
ಇದೀಗ ಕಲಾವಿದರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಪ್ರಮುಖವಾಗಿರುವ ಸೇವಾಸಿಂಧು ಆ್ಯಪ್ ನಲ್ಲಿಯೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಸಂತ್ರಸ್ಥರು ಪರದಾಡುವಂತಾಗಿದೆ.
ಈ ಬಗ್ಗೆ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತಿರುವ ಸ್ವಯಂಸೇವಕರು ಮಾಹಿತಿ ನೀಡಿದ್ದು, ಪರಿಹಾರ ಪಡೆಯಲು ಕಾರ್ಮಿಕರು, ಕಲಾವಿದರು ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಸಲ್ಲಿಸಲು ಸಾಕಷ್ಟು ತಾಂತ್ರಿಕ ದೋಷಗಳು ಎದುರಾಗುತ್ತಿದೆ ಎಂದು ಹೇಳಿದ್ದಾರೆ.
ಸಾಕಷ್ಟು ಫಲಾನುಭವಿಗಳ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವುದು ಒಂದು ಸಮಸ್ಯೆಯಾಗಿದ್ದಾರೆ. ಫೋನ್ ಇದ್ದರೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಅರ್ಜಿ ಸಲ್ಲಿಸಲು ಆನ್’ಲೈನ್ ಗಳಲ್ಲಿರುವ ವಿಡಿಯೋಗಳಲ್ಲಿ ಅರ್ಜಿ ಸಲ್ಲಿಸಲು ಫೋಟೋ ಕೂಡ ಅಗತ್ಯವಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಇದರೊಳಗೆ ನೋಂದಾವಣಿ ಕೇಂದ್ರಗಳಲ್ಲಿ 2 ಸೆಟ್ ದಾಖಲಾತಿಗಳನ್ನು ಕೇಳುತ್ತಿದೆ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ಬ್ಯಾಂಕ್ ಪಾಸ್’ಪೋರ್ಟ್, ಗೆಜೆಟೆಡ್ ಅಧಿಕಾರಿಯೊಬ್ಬರು ಸಹಿ ಮಾಡಿದ ನೌಕರರ ಪ್ರಮಾಣಪತ್ರ ಕೇಳುತ್ತಿದ್ದಾರೆ.
ಕೆಲವೇ ದಾಖಲಾತಿಗಳೊಂದಿಗೆ ನೋಂದಾವಣಿ ಕೇಂದ್ರಕ್ಕೆ ಬರುವವರು ದಾಖಲಾತಿ ಪತ್ರ ತರಲು ಆಗಾಗ ಓಡಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ನೋಂದಾವಣಿ ಮಾಡಿಕೊಳ್ಳಲು ಒಂದು ದಿನ ಕಾಲ ಕಳೆಯುವಂತಾಗಿದೆ. ಇದರಿಂದ ಅವರ ಒಂದು ದಿನದ ದಿನಗೂಲಿ ಹಾಳಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಯುವ ಘಟದ ಉಪಾಧ್ಯಕ್ಷೆ ಸಿಂಧು ಮಳವಳ್ಳಿಯವರು ಹೇಳಿದ್ದಾರೆ.
ಮತ್ತೊಂದೆಡೆ ಒಟಿಪಿ ಕೂಡ ಸಮಸ್ಯೆಯಾಗಿದೆ ಪರಿಣಮಿಸಿದೆ. ಸಾಕಷ್ಟು ಫಲಾನುಭವಿಗಳ ಬಳಿ ಆಧಾರ್ ಕಾರ್ಡ್’ಗೆ ಲಿಂಕ್ ಮಾಡದ ಮೊಬೈಲ್ ಸಂಖ್ಯೆಯನ್ನು ಹೊಂದಿದ್ದಾರೆ. ಮೊಬೈಲ್ ಸಂಖ್ಯೆಯಿದ್ದರೂ ಒಟಿಪಿ ಬಂದರೂ ಅದನ್ನು ಯಾವ ರೀತಿ ಪಡೆದುಕೊಳ್ಳಬೇಕೆಂಬುದು ಸಾಕಷ್ಟು ಜನರಿಗೆ ತಿಳಿಯುತ್ತಿಲ್ಲ. ಬೇರೆಯವರ ಸಹಾಯ ಪಡೆದು ತಿಳಿದುಕೊಳ್ಳಲು ಮುಂದಾದರೆ ಅಷ್ಟರಲ್ಲಾಗಲೇ ಒಟಿಪಿ ಸಮಯದ ಅವಧಿ ಮುಗಿದಿರುತ್ತದೆ. ಒಂದೇ ಕುಟುಂಬದಲ್ಲಿ ಇಬ್ಬರು ಫಲಾನುಭವಿಗಳಿದ್ದರೆ ಒಬ್ಬರ ಅರ್ಜಿ ತಿರಸ್ಕರಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಹೆಲ್ಪಿಂಗ್ ಹ್ಯಾಂಡ್ಸ್ ಎಂಬ ಎನ್‌ಜಿಒ ಸದಸ್ಯ ಸಲ್ಮಾನ್ ವಸೀಮ್ ಅವರು ಮಾತನಾಡಿ, ಪಿನ್ ಕೋಡ್ ಹಾಕಿದರೆ, ತಪ್ಪಾಗಿದೆ ಎಂದು ಹೇಳಲಾಗುತ್ತಿದೆ. ಮತ್ತೊಮ್ಮೆ ನಮೂದಿಸಿದರೆ ಸ್ವೀಕರಿಸುತ್ತದೆ. “ನನ್ನನ್ನು ಸಂಪರ್ಕಿಸಿದ 15 ಜನರಲ್ಲಿ ಕೇವಲ ಐದು ಮಂದಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿ ಸಲ್ಲಿಸಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಅರ್ಜಿಗಳನ್ನು ಭರ್ತಿ ಮಾಡುವಂತೆ ಸರ್ಕಾರಿ ಕೇಂದ್ರಗಳಿಗೆ ಸರ್ಕಾರ ನಿರ್ದೇಶಿಸಿದರೆ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಆಟೋ ಮತ್ತು ಕ್ಯಾಬ್ ಚಾಲಕರು ಅರ್ಜಿಗಳನ್ನು ಸಲ್ಲಿಸಲು ಸಹಾಯ ಮಾಡುತ್ತಿರುವ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಷ್ಟ್ರೀಯ ಸಂಯೋಜಕರಾದ ಮೊಹಮ್ಮದ್ ಫಹಾದ್ ಅವರು ಮಾತನಾಡಿ, ಸರ್ವರ್ ಸ್ಲೋ ಆಗಿದ್ದು, ಅರ್ಜಿ ಸಲ್ಲಿಸಿದ ಬಳಿಕ 30 ಸೆಕೆಂಡುಗಳಲ್ಲಿ ಲಾಗ್ಔಟ್ ಆಗುತ್ತದೆ. ಹೀಗಾಗಿ ಮತ್ತೆ ವಿವರಗಳನ್ನು ನಮೂದಿಸಬೇಕಾಗುತ್ತದೆ. ಒಂದು ಅರ್ಜಿಯನ್ನು ಸಲ್ಲಿಸಿದ ನಂತರ ಮುಂದಿನ ಅರ್ಜಿ ಸ್ವೀಕರಿಸಲು ಪೋರ್ಟಲ್ 20-30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಇತರರಿಂದ ಬಾಡಿಗೆಗೆ ಆಟೋ ಅಥವಾ ಕ್ಯಾಬ್‌ಗಳನ್ನು ತೆಗೆದುಕೊಳ್ಳುವ ಚಾಲಕರು ಪರಿಹಾರ ಪಡೆದುಕೊಳ್ಳಲು ಅರ್ಹರಾಗಿಲ್ಲ. ಏಕೆಂದರೆ ಅವರು ಪರವಾನಗಿ ಪಡೆದ ಮಾಲೀಕರಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ