ಮಾರಾಣಾಂತಿಕ ಹಲ್ಲೆ ಆರೋಪಿಗೆ ನಿರೀಕ್ಷಣಾ ಜಾಮೀನು
ಕೋಟ (ಉಡುಪಿ ಟೈಮ್ಸ್ ವರದಿ): ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಲಾಡಿ ಗ್ರಾಮದ ಚಿಕ್ಕಮ್ಮ ದೇವಸ್ಥಾನದ ಹತ್ತಿರ ರಾಘವೇಂದ್ರ ಎಂಬುವವರಿಗೆ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಲಾದ ಬಿಲ್ಲಾಡಿಯ ಅರುಣ್ ಗಾಣಿಗ ಎಂಬಾತನಿಗೆ ಕುಂದಾಪುರದ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಾಘವೇಂದ್ರ ಇವರು ಆರೋಪಿಯ ಮನೆಯ ಹತ್ತಿರದ ಓಣಿಯಲ್ಲಿರುವ ಮರದ ಒಣ ಎಲೆಗಳನ್ನು ತೆಗೆಯುತ್ತಿರುವಾಗ ಆರೋಪಿ ಏಕಾಏಕಿ ಅವಾಚ್ಯವಾಗಿ ಬೈದು ,ಗದರಿಸಿ ಕೊಲ್ಲುವ ಉದ್ದೇಶದಿಂದ ಮರದ ಕೋಲಿನಿಂದ ಬಲವಾಗಿ ರಾಘವೇಂದ್ರ ಇವರ ತಲೆಗೆ ಹೊಡೆದು ಆರೋಪಿ ಓಡಿ ಹೋಗಿರುತ್ತಾನೆ ಹಾಗೂ ಗಾಯಗೊಂಡ ರಾಘವೇಂದ್ರ ಅವರನ್ನು ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ಗಾಯಾಳುವಿಗೆ ಆಗಿದೆ ಎನ್ನಲಾದ ಗಾಯಗಳು ಯಾವ ಸ್ವರೂಪದ ಗಾಯಗಳು ಎಂದು ಗಾಯದ ಪ್ರಮಾಣ ಪತ್ರದಲ್ಲಿ ನಮೂದಿಸಿರುವುದಿಲ್ಲ ಅಲ್ಲದೇ ಒಂದು ಸಣ್ಣ ಕೋಲಿನಿಂದ ಯಾವುದೇ ವ್ಯಕ್ತಿಯನ್ನು ಕೊಲೆ ಮಾಡಲು ಸಾಧ್ಯವಿಲ್ಲ ಎಂದು ವಾದಿಸಲಾಗಿತ್ತು.
ಲಾಕ್‌ಡೌನ್ ಅನ್ವಯ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಮಾರ್ಗಸೂಚಿ ಪ್ರಕಾರ ವಿಡೀಯೋ ಕಾನ್ಪರೆನ್ಸ್ ಮೂಲಕ ಆರೋಪಿಯ ಪರ ವಕೀಲರು ವಾದಿಸಿದ್ದು, ವಾದವನ್ನು ಎತ್ತಿ ಹಿಡಿದ ಕುಂದಾಪುರದ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಭಾರ ನ್ಯಾಯಾಧೀಶೆ ಕಲ್ಪನಾ ಎರ್ಮಾಳ್ ಆರೋಪಿ ಅರುಣ್ ಗಾಣಿಗನಿಗೆ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುತ್ತಾರೆ. ಆರೋಪಿಯ ಪರವಾಗಿ ಕುಂದಾಪುರದ ವಕೀಲರಾದ ಬನ್ನಾಡಿ ಸೋಮನಾಥ ಹೆಗ್ಡೆ, ರವಿ ಶೆಟ್ಟಿ ಮಚ್ಚಟ್ಟು ಮತ್ತು ರಾಜಶೇಖರ ನಾವುಂದ ವಾದಿಸಿದ್ದರು.