ಉಪಚುನಾವಣೆ ಗೆಲುವು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ: ಉದಯ ಕುಮಾರ್ ಶೆಟ್ಟಿ

ಉಡುಪಿ(ಉಡುಪಿ ಟೈಮ್ಸ್ ವರದಿ): ಶಿರಾ ಮತ್ತು ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಪ್ರಚಂಡ ಗೆಲುವು ಸಾಧಿಸಿರುವುದು, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನಪರ ಆಡಳಿತ ವೈಖರಿ  ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನಾ ಚತುರತೆಗೆ ಸಾಕ್ಷಿ. ಈ ಗೆಲುವು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಶಿರಾ ಮತ್ತು ಆರ್.ಆರ್. ನಗರ ಉಪಚುನಾವಣೆ ಗೆಲುವಿನ ಬಗ್ಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಚೇರಿ ಬಳಿ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗಿನಂತಿದ್ದು ಗೊಂದಲದ ಗೂಡಾಗಿರುವ ನಾಯಕತ್ವ ಈ ಫಲಿತಾಂಶದಿಂದ ಜಗಜ್ಜಾಹೀರಾಗಿದೆ. ಪ್ರಧಾನಿ ಮೋದಿ ಪ್ರಭಾವ ಬಿಹಾರದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದ್ದು ದೇಶದೆಲ್ಲೆಡೆ ನಡೆಯುವ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿಗಳಿಸಲಿದೆ ಎಂದರು.

ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ಶಿರಾ ಮತ್ತು ಆರ್.ಆರ್. ನಗರದ ಗೆಲುವು ರಾಜ್ಯದ ಅಭಿವೃದ್ಧಿ ಪರ ಆಡಳಿತ ಮತ್ತು ಬಿಜೆಪಿಯ ಪಕ್ಷ ಸಂಘಟನಾ ಶಕ್ತಿಯ ಪ್ರತೀಕವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪಕ್ಷದ ನಾಯಕರ ನಿರೀಕ್ಷೆಯಂತೆಯೇ ಐತಿಹಾಸಿಕ ಗೆಲುವು ದೊರೆತಿದೆ. ಆರ್.ಆರ್. ನಗರದಲ್ಲಿ ಮುನಿರತ್ನ ಭರ್ಜರಿ ಹ್ಯಾಟ್ರಿಕ್ ಗೆಲುವಿನ ಜೊತೆಗೆ ಶಿರಾ ಕ್ಷೇತ್ರದಲ್ಲಿ ರಾಜೇಶ್ ಗೌಡ ವಿಜಯದ ಮೂಲಕ ಮೊದಲ ಬಾರಿಗೆ ಕಮಲ ಅರಳಿದೆ. ಈ ಗೆಲುವು ಪಕ್ಷ ಸಂಘಟನೆಗೆ ಇನ್ನಷ್ಟು ಚೈತನ್ಯ ನೀಡಿ ಮುಂದಿನ ಎಲ್ಲಾ ಚುನಾವಣೆಗಳಿಗೆ ಸ್ಫೂರ್ತಿ ತುಂಬಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಾಲ್ಯಾನ್, ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರರಾದ  ಗಿರೀಶ್ ಎಮ್. ಅಂಚನ್, ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಪ್ರಮುಖರಾದ ರಶ್ಮಿತಾ ಬಿ. ಶೆಟ್ಟಿ, ಮಂಜುನಾಥ್ ಮಣಿಪಾಲ್, ಚಂದ್ರಶೇಖರ್ ಪ್ರಭು, ಶಿವರಾಮ ಕಡಿಮಾರ್, ಲೀಲಾ ಅಮೀನ್, ಪೂರ್ಣಿಮಾ ಶೆಟ್ಟಿ, ಸುಬೇದ, ಮಾಯಾ ಕಾಮತ್, ಪೂರ್ಣಿಮಾ ರತ್ನಾಕರ್, ಲೈಲಾ ಪ್ರಭಾವತಿ, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!