ಉಡುಪಿ: ಊಟಕ್ಕಿಲ್ಲದ ಉಪ್ಪಿನಕಾಯಿ ಆಯಿತೇ ನರ್ಮ್ ಬಸ್ ?

ಉಡುಪಿ ಜೂ.23( ಉಡುಪಿ ಟೈಮ್ಸ್ ವರದಿ): ಕೋವಿಡ್ 2 ನೇ ಅಲೆಯ ಪ್ರಭಾವದಿಂದ ರಾಜ್ಯದಲ್ಲಿ ಸಂಕಷ್ಟ ಸಿಲುಕಿದವರು ಹಲವಾರು ಮಂದಿ ಇಡೀ ರಾಜ್ಯಕ್ಕೆ ರಾಜ್ಯವೇ ಸಂಕಷ್ಟ ದ ಸುಳಿಯಲ್ಲಿ ಸಿಲುಕಿದೆ ಅಂದರೆ ತಪ್ಪಾಗಲಾರದು. ಇದೇ ವಿಚಾರದಲ್ಲಿ ಕರಾವಳಿಯತ್ತ ಒಮ್ಮೆ ದೃಷ್ಟಿ ಹಾಯಿಸಿದರೆ ಉಭಯ ಜಿಲ್ಲೆಗಳಾದ ಉಡುಪಿ ಮತ್ತು ದ.ಕ ಜಿಲ್ಲೆ ಕೋವಿಡ್ ಹಾವಳಿಗೆ ಅಕ್ಷರಶಃ ನಲುಗಿ ಹೋಗಿದೆ. ಸದ್ಯ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ನಿಯಂತ್ರಣ ಕ್ಕೆ ಬರುತ್ತಿವೆಯಾದರೂ. ಕೋವಿಡ್ ಪ್ರವಾಹದಿಂದ ತತ್ತರಿಸಿದವರು ಚೇತರಿಸಿಕೊಳ್ಳಬೇಕಾದರೆ ವರುಷಗಳೇ ಕಳೆಯಬೇಕೇನೋ …?

ಉಡುಪಿ ,ದ.ಕ ಜಿಲ್ಲೆಗಳಲ್ಲಿ ಸಂಚಾರಕ್ಕೆ ಸರಕಾರಿ ಬಸ್ ಗಳು ಇವೆಯಾದರೂ ಉಭಯ ಜಿಲ್ಲೆಗಳ ನಡುವೆ ಮತ್ತು ಜಿಲ್ಲೆಗಳ ಆಂತರಿಕ ಸಂಚಾರಕ್ಕೆ ಖಾಸಗಿ ಬಸ್ ಗಳೇ ಸಾರ್ವಜನಿಕರ ಮೊದಲ ಆಯ್ಕೆಯಾಗಿರುತ್ತದೆ. ಆದರೀಗ ಕೋವಿಡ್ ಪ್ರಭಾವದಿಂದಾಗಿ ಬಸ್ ಗಳ ಸಂಚಾರ ಸ್ಥಗಿತಗೊಂಡಿದ್ದು ಅದನ್ನೇ ನಂಬಿಕೊಂಡಿದ್ದ ಅನೇಕರ ಬದುಕು ಬರಡಾಗಿದೆ.

ಹೌದು ಕೋವಿಡ್ 2ನೇ ಅಲೆಯ ಬಳಿಕ ಸೋಂಕು ಹೆಚ್ಚು ಹರಡಬಹುದು ಎಂಬ ಕಾರಣದಿಂದ ಬಸ್ ಸಂಚಾರವನ್ನು ಸ್ಥಗಿತ ಗೊಳಿಸಲಾಗಿತ್ತು. ಪ್ರಸ್ತುತ ಜಿಲ್ಲೆಗಳಲ್ಲಿ ಸರಕಾರಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಯಾದರೂ ಅದಕ್ಕೂ ನ್ಯಾಯಾಲಯದ ಮೆಟ್ಟಲೇರಿ ಹೋರಾಟ ಮಾಡಬೇಕಾಯಿತು. ಇನ್ನು ಉಡುಪಿ ಜಿಲ್ಲೆಯ ನರ್ಮ್ ಬಸ್ ಗಳು ಹೆಸರಿಗೆ ಮಾತ್ರ ಇವೆ ಎಂಬಂತಾಗಿ ಹೋಗಿದೆ.

ಸದ್ಯ ಕೋವಿಡ್ ಸೋಂಕಿನ ಪ್ರಕರಣಗಳು ಇಳಿಮುಖ ವಾಗಿರುವುದರಿಂದ ಖಾಸಗಿ ಬಸ್ ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ ಯಾದರೂ ಪ್ರಯಾಣಿಕರ ವಿರಳತೆ ಮತ್ತು ಕಠಿಣ ನಿಯಮಗಳ ಕಾರಣದಿಂದ ಖಾಸಗಿ ಬಸ್ ನವರು ತಮ್ಮ ಬಸ್ ಗಳನ್ನು ರೋಡಿಗಿಳಿಸಲು ಹಿಂದೇಟು ಹಾಕುತ್ತಿದ್ದಾರೆ.ಇದರಿಂದಾಗಿ ಬಸ್ಸನ್ನೇ ನಂಬಿಕೊಂಡಿದ್ದ ಅನೇಕರು ಕಂಗಾಲಾಗಿದ್ದಾರೆ. ಆದರೂ ಬಸ್ ಚಾಲಕರ, ನಿರ್ವಾಹಕರ ಮತ್ತು ಕ್ಲೀನರ್ ಗಳ ಕಷ್ಟ ಕೇಳುವವರೇ ಇಲ್ಲದಂತಾಗಿದೆ.


ಹಿಂದೆಲ್ಲಾ ಇಂಧನ ಬೆಲೆ ಹೆಚ್ಚಾದಾಗ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದವರು ಈಗ ಸೂಕ್ತ ಪರಿಹಾರಕ್ಕಾಗಿ ಪ್ರತಿಭಟಿಸುವವರೇ ಇಲ್ಲವಾಗಿದೆ.ಈ ನಡುವೆ ಇದಕ್ಕೆಲ್ಲಾ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಖಾಸಗಿ ಬಸ್ ಮಾಲಕರ ಸಂಘದಲ್ಲಿ ಆಡಳಿತರೂಢ ಬಿಜೆಪಿ ಪಕ್ಷದ ಬೆಂಬಲಿತರು ಹೆಚ್ಚಾಗಿರುವುದೇ ಕಾರಣ ಎಂಬ ಅಭಿಪ್ರಾಯ ಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೇ ಬೀದಿಗಿಳಿದು ಪರಿಹಾರಕ್ಕಾಗಿ ಆಗ್ರಹಿಸಿದರೆ ತಮ್ಮ ಪಕ್ಷದ ವರ್ಚಸ್ಸು ಎಲ್ಲಿ ಹಾಳಾಗುತ್ತದೋ ಎಂಬ ಭಯದಿಂದ ತಮ್ಮದೇ ಜನರ, ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದ್ದಾರೆ ಎಂದೂ ಎನ್ನಲಾಗುತ್ತಿದೆ.

ಹೀಗಿರುವಾಗ ಸರಕಾರವಾದರೂ ಬಸ್ ಕಾರ್ಮಿಕರ ನೋವಿಗೆ ಸ್ಪಂದಿಸಬೇಕು. ಸಮಸ್ಯೆ ಈಡೇರುವ ತನಕ ಪ್ರತಿ ತಿಂಗಳು ಕನಿಷ್ಠ 10 ಸಾವಿರವಾದರೂ ಪರಿಹಾರ ನೀಡಬೇಕು‌ ಎಂಬ ಆಗ್ರಹಗಳೂ ಕೇಳಿ ಬರುತ್ತಿದೆ. ಇನ್ನು ಪ್ರಮುಖವಾಗಿ ಸರಕಾರ ಮತ್ತು ಖಾಸಗಿ ಬಸ್ ಮಾಲಕರ ನಡುವಿನ ಸಮಸ್ಯೆಗೆ ಗ್ರಾಮೀಣ ಪ್ರದೇಶದ ಜನರು ಸಮಸ್ಯೆಗೀಡಾಗುತ್ತಿದ್ದಾರೆ. ಅಲ್ಲದೆ ಕರಾವಳಿಯ ಬಹುತೇಕ ಬಸ್ ಮಾಲಕರು ಕೂಡ ಸರಕಾರದ ನೀತಿಯಿಂದ ಕಂಗಲಾಗಿದ್ದಾರೆ.ಆದ್ದರಿಂದ ಅವರ ವಾರ್ಷಿಕ ತೆರಿಗೆ ಮೊತ್ತವನ್ನೂ ಮನ್ನಾ ಮಾಡುವ ಕುರಿತು ಸರಕಾರ ಚಿಂತಿಸಬೇಕಾಗಿದೆ. ಇನ್ನಾದರೂ ಉಭಯ ಜಿಲ್ಲೆಗಳ ಶಾಸಕರು, ಸಂಸದರು ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಲುವಾಗಿ ಸರಕಾರದ ಜೊತೆ ಮಾತುಕತೆ ನಡೆಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!