ಕುಯಿಲಾಡಿ ಕಾಪು ಕ್ಷೇತ್ರ ಟಿಕೆಟ್ ಆಕಾಂಕ್ಷಿ ಇರಬಹುದು ಹಾಗಾಗಿ ಧರ್ಮದ ಹೆಸರಿನಲ್ಲಿ ರಾಜಕೀಯ ಆರಂಭಿಸಿದ್ದಾರೆ: ಕೊಡವೂರು
ಉಡುಪಿ ಜೂ.23( ಉಡುಪಿ ಟೈಮ್ಸ್ ವರದಿ): ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಪುತ್ತೂರಿನವರು ಅವರಿಗೆ ಇಲ್ಲಿಯ ಚಿಂತೆ ಏಕೆ ಎಂಬ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಬಲವಾಗಿ ಖಂಡಿಸಿದೆ. ಇಂದು ಉಡುಪಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ವಯಸ್ಸಿನಷ್ಟು ರಾಜಕೀಯ ಅನುಭವ ಹೊಂದಿದ್ದಾರೆ. ಇಂತಹ ಹಿರಿಯ ಅನುಭವಿ ರಾಜಕಾರಣಿಯ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಜಿಲ್ಲಾ ಕಾಂಗ್ರೆಸ್ ಆಕ್ಷೇಪಿಸುತ್ತದೆ. ಬಿಜೆಪಿ ಜಿಲ್ಲಾಧ್ಯಕ್ಷರು ಕೂಡಲೇ ತಮ್ಮ ಮಾತನ್ನು ಹಿಂದೆ ಪಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತು ಮುಂದು ವರೆಸಿದ ಅವರು, ವಿನಯ್ ಕುಮಾರ್ ಸೊರಕೆ ಅವರು ಪುತ್ತೂರಿನವರಾದರೆ ಶೋಭಾ ಕರಂದ್ಲಾಜೆ ಎಲ್ಲಿಯವರು? ಅಲ್ಲದೆ ಸದಾನಂದ ಗೌಡ ಎಲ್ಲಿಯವರು, ಇಲ್ಲಿಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದ.ಕ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮಾಡಿದ್ದಾರಲ್ಲ ಅದೆಲ್ಲಾ ಸರಿಯಾ? ಇದರ ಬಗ್ಗೆ ನಾವು ಎಲ್ಲೂ ಪ್ರೆಶ್ನಿಸಿಲ್ಲ ಎಂದು ಖಡಕ್ಕಾಗಿ ಪ್ರಶ್ನಿಸಿದ್ದಾರೆ ಬಹುಶ: ಕುಯಿಲಾಡಿಯವರಿಗೆ ಕಾಪು ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿರಬಹುದು ಅದಕ್ಕಾಗಿಯೇ ಧರ್ಮದ ಹೆಸರಿನಲ್ಲಿ ರಾಜಕೀಯ ಪ್ರಾರಂಭಿಸಿದ್ದಾರೆ ಎಂದರು .
ಇನ್ನು ಹೆಣಗಳ ಜೊತೆಗೆ ರಾಜಕೀಯ ಮಾಡುವ ಶೋಭಾ ಕರಂದ್ಲಾಜೆ ಅವರದ್ದೇ ಪಕ್ಷದ ಕಾರ್ಯಕರ್ತರಾಗಿದ್ದ ಉದಯ ಗಾಣಿಗ ಅವರು ಮೃತಪಟ್ಟಾಗ ಯಾಕೆ ಬಂದಿಲ್ಲ. ತಮ್ಮದೇ ಪಕ್ಷದ ಕಾರ್ಯಕರ್ತರ ಅಂತಿಮ ಕಾರ್ಯ ಕ್ಕೆ ಹೋಗಿಲ್ಲ. ಪಕ್ಷದ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಅವರಿಗೆ ಉದಯ ಗಾಣಿಗ ಅವರ ಮನೆಯವರೊಂದಿಗೆ ಮಾತನಾಡಿಸುವ ಕನಿಷ್ಟ ಪ್ರಜ್ಞೆ ಯೂ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ
ಇದೇ ವೇಳೆ ರಾಮ ಮಂದಿರ ನಿರ್ಮಾಣ ಕ್ಕಾಗಿ ದೇಶದ ಸಮಸ್ತ ಜನರು ದೇಣಿಗೆಯನ್ನು ನೀಡಿರುವಾಗ ಪ್ರತಿಯೊಬ್ಬ ವ್ಯಕ್ತಿಗೂ ಹಣ ವಿನಿಯೋಗವನ್ನು ಪ್ರಶ್ನಿಸುವ ಹಕ್ಕಿದೆ.ಹೀಗಿರುವಾಗ ನಡೆದ ಅವ್ಯವಹಾರದ ಬಗ್ಗೆ ಮಾತೆತ್ತಿದರೆ ಅದು ಹಿಂದೂಗಳ ಭಾವನೆಗೆ ಘಾಸಿ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಅವರು . ಭಕ್ತರಿಂದ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್ ಗೆ ವಿನಿಯೋಗಿಸುವುದು ರಾಮನಿಗೆ ದ್ರೋಹ ಬಗೆದಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ಪಿ.ಸಿ.ಸಿ. ಪ್ಯಾನಲಿಷ್ಟ್ ವೆರೋನಿಕಾ ಕರ್ನೆಲಿಯೋ ಮಾತನಾಡಿ ನಿಮ್ಮ ಗರಡಿಯಲ್ಲಿರುವ ಶೋಭಾ ಕರಂದ್ಲಾಜೆಯವರನ್ನು ಮೊದಲು ಅವರ ಊರಿಗೆ ಕಳಿಹಿಸಿ ಮತ್ತೆ ಈ ಬಗ್ಗೆ ಚರ್ಚೆ ನಡೆಸುವ ಎಂದರು. ಉದಯ ಗಾಣಿಗರವರನ್ನು ಕೊಂದವರು ಪಂಚಾಯತ್ ಅಧ್ಯಕ್ಷರು ಅವರ ಸದಸ್ಯತ್ವವನ್ನು ರದ್ದುಮಾಡಿ ಸೂಕ್ತ ಕಾನೂನು ಶಿಕ್ಷೆಯಾಗಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದ ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಶಲ ಶೆಟ್ಟಿ, ಲೀಗಲ್ ಸೆಲ್ ನ ಅಧ್ಯಕ್ಷರಾದ ಹರೀಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಕೀರ್ತಿ ಶೆಟ್ಟಿ, ಪ್ರಶಾಂತ ಜತ್ತನ್ನ, ಬಾಲಕೃಷ್ಣ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷರಾದ ರೋಷನ್ ಶೆಟ್ಟಿ , ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು