ಮಂಗಳೂರು: ಶೇ 50% ಸೀಟಿಂಗ್ ಹಾಕಿ ಖಾಸಗಿ ಬಸ್ ಓಡಿಸಲು ಸಾಧ್ಯವಿಲ್ಲ : ದಿಲ್ ರಾಜ್ ಆಳ್ವ
ಮಂಗಳೂರು, ಜೂನ್ 23(ಉಡುಪಿ ಟೈಮ್ಸ್ ವರದಿ); ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆಯಾಗಿದ್ದು. ಎಲ್ಲಾ ಅಂಗಡಿಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ ಸಿಕ್ಕಿದೆ. ಹಾಗೂ ಬಸ್ ಸಂಚಾರವನ್ನು ನಡೆಸಬಹುದೆಂದು ರಾಜ್ಯ ಸರ್ಕಾರ ಆದೇಶ ನೀಡಿದೆ ಆದರೆ ಖಾಸಗಿ ಬಸ್‌ಗಳ ಮಾಲೀಕರು ಮಾತ್ರ ಯಾವುದೇ ಕಾರಣಕ್ಕೂ ಈ ತಿಂಗಳು ಬಸ್ ರೋಡಿಗೆ ಇಳಿಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
“ಜೂನ್ ತಿಂಗಳ ಅಂತ್ಯದವರೆಗೆ ಖಾಸಗಿ ಬಸ್ ಓಡಿಸುವುದಿಲ್ಲ. ಮಧ್ಯದಲ್ಲಿ ಬಸ್ ಓಡಿಸಿದರೆ ಟ್ಯಾಕ್ಸ್ ಸೇರಿ ಇತರೆ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರ ಮಾಡದಿರಲು ನಿರ್ಧರಿಸಿದ್ದೇವೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವಾ ತಿಳಿಸಿದ್ದಾರೆ.
“ಡಿಸೇಲ್ ಬೆಲೆಯೇರಿಕೆ ಮಧ್ಯೆ ಶೇ 50% ಸೀಟಿಂಗ್ ಹಾಕಿ ಬಸ್ ಓಡಿಸಲು ಸಾಧ್ಯವಿಲ್ಲ. ಬಸ್ ಓಡಿಸಿದರೆ ತೆರಿಗೆ ಕಟ್ಟಬೇಕಾಗಿರುವ ಕಾರಣ ಅದು ಕಷ್ಟವಾಗಿದೆ. ಹೀಗಾಗಿ ಈ ತಿಂಗಳ ಅಂತ್ಯದವರೆಗೆ ಬಸ್ ಓಡಿಸದೇ ಇರಲು ನಿರ್ಧಾರ ಮಾಡಿದ್ದೇವೆ. ಎರಡು ತಿಂಗಳಿನಿಂದ ನಿಂತಿರುವ ಬಸ್‌ಗಳನ್ನು ಏಕಾಏಕಿ ಓಡಿಸಲು ಆಗುವುದಿಲ್ಲ ಹಾಗಾಗಿ ಮಂಗಳೂರಿನಲ್ಲಿ ಖಾಸಗಿ ಬಸ್‌ಗಳು ಓಡಾಟ ಮಾಡುವುದಿಲ್ಲ” ಎಂದು ದಿಲ್ ರಾಜ್ ಆಳ್ವಾ ತಿಳಿಸಿದ್ದಾರೆ