ಕಲಾಪೋಷಕ ಕುಕ್ಕಿಕಟ್ಟೆ ಸುರೇಶ್(ಪುಟ್ಟಭಟ್) ನಿಧನ
ಉಡುಪಿ(ಉಡುಪಿ ಟೈಮ್ಸ್ ವರದಿ: ಕಲಾ ಪೋಷಕರಾಗಿದ್ದ ಕುಕ್ಕಿಕಟ್ಟೆಯ ಸುರೇಶ್ (ಪುಟ್ಟ ಭಟ್, 50) ಇಂದು ನಿಧನರಾಗಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗ ಉಡುಪಿ ಇದರ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಸಂತಾಪ ಸೂಚಿಸಿದ್ದಾರೆ.
ಕಲಾಪೋಷಕರು: ಕುಕ್ಕಿಕಟ್ಟೆಯ ನಿವಾಸಿ ಶ್ರೀಕಲಾ ವಾಣಿಜ್ಯ ಸಂಕೀರ್ಣದ ಮಾಲಕರಾಗಿರುವ ಸುರೇಶ್ ಅವರು ಭ್ರಮರ’ ಕಾಂಟೀನ್ ನಡೆಸುತ್ತಾ ಪಾರಂಪರಿಕ ತಿಂಡಿ-ತಿನಿಸುಗಳನ್ನು ಮಾಡುವಲ್ಲಿ ವಿಶೇಷ ಪ್ರಾವೀಣ್ಯತೆಯನ್ನು ಹೊಂದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸ್ವಂತ ವೇಷಭೂಷಣ ಸಹಿತ ‘ಶ್ರೀಕಲಾ ಸಂಗಮ ಯಕ್ಷಗಾನ ಮಕ್ಕಳ ಮೇಳ ವನ್ನು ಸ್ಥಾಪಿಸಿ ಎಳೆಯ ಮಕ್ಕಳಲ್ಲಿ ಯಕ್ಷಗಾನಾಸಕ್ತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯಕ್ಷಗಾನ ಕಲೆಯನ್ನು ಅತೀವ ಪ್ರೀತಿಸುತ್ತಿದ್ದ ಇವರು ಪ್ರತಿವರ್ಷ ವಿಶೇಷ ರೀತಿಯಲ್ಲಿ ಮೇಳದ ಯಕ್ಷಗಾನವನ್ನು ಆಯೋಜಿಸುತ್ತಾ, ಹಲವಾರು ಅಶಕ್ತರಿಗೆ, ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ, ಯಕ್ಷಗಾನ ಮಂಡಳಿಗಳಿಗೆ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು.
ಹೈನುಗಾರಿಕಾ ಕೃಷಿಕರಾಗಿದ್ದ ಇವರು, ಅಶಕ್ತರಿಗೆ, ವಿದ್ಯಾರ್ಥಿಗಳಿಗೆ ಸಹಾಯಧನ ನೀಡುತ್ತ ಸಮಾಜ ಸೇವೆಗಳನ್ನು ಯಾವುದೇ ಪ್ರಚಾರವಿಲ್ಲದೆ ನಡೆಸುತ್ತ ಸ್ಥಳೀಯವಾಗಿ ಹೆಸರುಗಳಿಸಿದ್ದರು.