ಕಾರ್ಕಳ; ಶಾಸಕ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಪೊಲೀಸರಿಂದ ತಡೆ!

ಕಾರ್ಕಳ ( ಉಡುಪಿ ಟೈಮ್ಸ್ ವರದಿ): ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ವತಿಯಿಂದ ಕಾರ್ಕಳ ದಲ್ಲೂ ಇಂದು ಕಾರ್ಕಳ ಶಾಸಕರ ಖಾಸಗಿ ಕಚೇರಿ ವಿಕಾಸದ ಮುಂದೆ ಜನಾಗ್ರಹ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿ ಆಡಳಿತ ವೈಫಲ್ಯ ಮತ್ತು ಲಾಕ್ ಡೌನ್ ನಿಂದ ಸಂತ್ರಸ್ತರಾದ ಕಾರ್ಮಿಕ ಶ್ರಮಿಕ ವರ್ಗದವರಿಗೆಂದು ಘೋಷಿಸಿರುವ ಪ್ಯಾಕೇಜ್ ಪಡೆಯಲು ವಿಧಿಸಲಾಗಿರುವ ಕಠಿಣ ಶರತ್ತುಗಳ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಶಾಸಕರಿಗೆ ಮನವಿ ನೀಡಲು ಕಚೇರಿ ಹತ್ತಿರಕ್ಕೆ ತೆರಳಲು ಮುಂದಾದ ಪ್ರತಿಭಟನಾ ನಿರತ ಕಾಂಗ್ರೆಸ್ ನ ಪ್ರಯತ್ನ ಕ್ಕೆ ಪೊಲೀಸರು ತಡೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ‌ ಚಕಮಕಿ ನಡೆಯಿತು.

ವ್ರತ್ತನಿರೀಕ್ಷಕ ಸಂಪತ್ ಕುಮಾರ್ ಅವರು ವಿಕಾಸ ಕಚೇರಿ ಶಾಸಕರ ಖಾಸಗಿ ಕಚೇರಿ ಹೀಗಾಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಅವಕಾಶವಿಲ್ಲ.ಜತೆಗೆ ಕೊರೋನಾ ಸಂಕಷ್ಟ ಸಮಯದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾ ನಿರತರಲ್ಲಿ ಮನವಿ ಮಾಡಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಜನರ ಸಮಸ್ಯೆಗಳು, ಸಂಕಷ್ಟ ಬೇಡಿಕೆ ಈಡೇರಿಸಲು ಶಾಸಕರು ಕ್ರಮವಹಿಸಬೇಕು ಇದು ಜನಾಗ್ರಹ. ಶಾಸಕರು ಕಚೇರಿಯೊಳಗೆ ಇರುವುದರಿಂದ ನಮಗೆ ಅವಕಾಶ ಮಾಡಿಕೊಡಬೇಕು.ಕೋವಿಡ್ ನಿಯಮ ಉಲ್ಲಂಘಿಸಿ ಬಿಳಿಬೆಂಡೆ ವಿತರಣೆ ಮಾಡಲು ಬಿಜೆಪಿಯವರಿಗೆ ಅವಕಾಶ ಕಲ್ಪಿಸುವುದಾದರೆ ನಮಗ್ಯಾಕೆ ಪ್ರತಿಭಟನೆ ನಡೆಸಲು, ಜನ ಸೇರಲು ನಿರಾಕರಿಸುತ್ತೀರಿ ಎಂದು ಪ್ರಶ್ನಿಸಿದರು. ಬಳಿಕ ಕೇಂದ್ರ, ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಶಾಸಕರ ವಿಕಾಸ ಕಚೇರಿ ಮುಂಭಾಗದ 25 ಮೀ.ದೂರದಲ್ಲಿ ಪ್ರತಿಭಟನೆ ಸಭೆ ನಡೆಸಿ ಜನರ ಬೇಡಿಕೆಗಳಿಗೆ ಆಗ್ರಹಿಸಿದರು.

ಕಾಂಗ್ರೆಸ್ ನ ಶಾಸಕರ ಕಚೇರಿ ಮುಂಭಾಗದ ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಮೀಸಲು ಪೊಲೀಸರ ಸಹಿತ ಬಿಗು‌ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನೆ ಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಪೂಜಾರಿ, ನೀರೆ ಕ್ರಷ್ಣ ಶೆಟ್ಟಿ, ಶುಭದ ರಾವ್, ಬಿಪಿನ್ ಚಂದ್ರಪಾಲ್ ನಕ್ರೆ ಮೊದಲಾದವರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!