ಕೋಟ: ಆನ್‌ಲೈನ್ ಯಕ್ಷಗಾನ ತರಬೇತಿ ಕಾರ್ಯಕ್ರಮ
ಕೋಟ( ಉಡುಪಿ ಟೈಮ್ಸ್ ವರದಿ): ಬೆಂಗಳೂರಿನ ಯಕ್ಷದೇಗುಲ ಆಯೋಜನೆಯಲ್ಲಿ ವಿಸ್ತಾರ್ ಚಿತ್ರದುರ್ಗ ಮತ್ತು ವಿಮುಕ್ತಿ ವಿದ್ಯಾಸಂಸ್ಥೆಯವರು ಅಲೆಮಾರಿ ಮತ್ತು ಅರೆ-ಅಲೆಮಾರಿ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಯಕ್ಷಗುರುಗಳಾದ ಪ್ರಿಯಾಂಕ ಕೆ. ಮೋಹನ್‌ರವರು ಯಕ್ಷಗಾನ ತರಬೇತಿಯನ್ನು ಹಮ್ಮಿಕೊಂಡಿದ್ದು, ಇದರ ಉದ್ಘಾಟನೆಯನ್ನು ಜೂ. 20ರಂದು ಆನ್‌ಲೈನ್ ಮೂಲಕ ಯಕ್ಷಗಾನ ವಿದ್ವಾಂಸ ಮತ್ತು ಉಪನ್ಯಾಸಕರಾದ ಸುಜಯೀಂದ್ರ ಹಂದೆಯವರು ದೀವಿಟಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಕೇವಲ ಬುದ್ಧಿ ಜೀವಿಯಾದರೆ ಸಾಲದು, ಆತ ಭಾವ ಜೀವಿಯೂ ಆಗಬೇಕು. ಶಾಲಾ-ಕಾಲೇಜುಗಳು ನಮ್ಮನ್ನು ಬುದ್ಧಿವಂತರನ್ನಾಗಿಸಿದರೆ, ಕಲೆ-ಸಾಹಿತ್ಯವು ನಮ್ಮನ್ನು ಹೃದಯವಂತರನ್ನಾಗಿ ಮಾಡುತ್ತದೆ. ಚಿತ್ರ-ಶಿಲ್ಪ-ಸಂಗೀತ-ನೃತ್ಯ-ಸಾಹಿತ್ಯವನ್ನೊಳಗೊಂಡ ಸಮಷ್ಠಿ ಕಲೆಯಾದ ಯಕ್ಷಗಾನವನ್ನು ಆಸ್ವಾದಿಸುವುದರಿಂದ ಬುದ್ಧಿ-ಭಾವಗಳೆರಡೂ ಸಿದ್ಧಿಸುತ್ತವೆ. ಯಕ್ಷಗಾನವು ಕರ್ನಾಟಕದ ಪ್ರಾತಿನಿಧಿಕ ಕಲೆಯಾಗಿ ಗುರುತಿಸಿಕೊಳ್ಳುವ ನೆಲೆಯಲ್ಲಿ ಅಧ್ಯಯನ ಮತ್ತು ಪ್ರದರ್ಶನಗಳು ಶಾಸ್ತ್ರೀಯ ರಂಗ ಶಿಸ್ತಿಗೆ ಒಳಗಾಗಬೇಕಿದೆ. ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನವನ್ನು ಮತ್ತೆ ಮತ್ತೆ ನೋಡಿದ ಕಣ್ಣುಗಳೇ ನೋಡುವುದಕ್ಕಿಂತ ಹೊಸ ಪ್ರೇಕ್ಷಕರನ್ನು ಮುಟ್ಟಬೇಕಾದ ಅನಿವಾರ್ಯತೆಯಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷದೇಗುಲದ ಪ್ರಿಯಾಂಕ ಕೆ. ಮೋಹನ್ ಆಯೋಜಿಸುತ್ತಿರುವ ಯಕ್ಷ ಕಲಿಕಾ ಶಿಬಿರ ಅಭಿನಂದನೀಯ ಎಂದರು.
ಹಾಗೆ ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ಸಂಪನ್ಮೂಲ ವ್ಯಕ್ತಿ ಸುದೀಪ ಉರಾಳರು ಉಪಸ್ಥಿತರಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಭಾಗವತ ಲಂಬೋದರ ಹೆಗಡೆ ನಿರೂಪಿಸಿದರು. ಈ ಎಲ್ಲಾ ಕಾರ್ಯಕ್ರಮವು ಆನ್‌ಲೈನ್ ಮೂಲಕ ನಡೆದಿರುವುದು ವಿಶೇಷ.
ಬೆಂಗಳೂರಿನ ಯಕ್ಷದೇಗುಲ ಸಂಯೋಜನೆಯಲ್ಲಿ ವಿಸ್ತಾರ್ ಚಿತ್ರದುರ್ಗ ಮತ್ತು ವಿಮುಕ್ತಿ ವಿದ್ಯಾಸಂಸ್ಥೆಯವರು ಅಲೆಮಾರಿ ಮತ್ತು ಅರೆ-ಅಲೆಮಾರಿ ಮಕ್ಕಳಿಗೆ ಆನ್‌ಲೈನ್ ಕಾರ್ಯಕ್ರಮವನ್ನು ಉಪನ್ಯಾಸಕರಾದ ಸುಜಯೀಂದ್ರ ಹಂದೆಯವರು ದೀವಿಟಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿದರು. ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ವೆಂಕಟೇಶ ವೈದ್ಯ, ಸಂಪನ್ಮೂಲ ವ್ಯಕ್ತಿ ಸುದೀಪ ಉರಾಳರು ಉಪಸ್ಥಿತರಿದ್ದರು