ಹೆಬ್ರಿ: ಜೆಡಿಎಸ್ ಪಕ್ಷದ ನೂತನ ಕಛೇರಿ ಉದ್ಘಾಟನೆ.
ಹೆಬ್ರಿ (ಉಡುಪಿ ಟೈಮ್ಸ್ ವರದಿ): : ಬಿಜೆಪಿ ಅದು ಭ್ರಷ್ಟಾಚಾರಿಗಳ ಪಕ್ಷ, ಬಿಜೆಪಿ ನಾಯಕರು ಮತ್ತು ಪಕ್ಷದ ಉದ್ದೇಶವೇ ಭ್ರಷ್ಟಾಚಾರ ಮಾಡುವುದು, ಕೊರೋನಾ ಸಂಕಷ್ಟದಿಂದ ಜನತೆ ಉದ್ಯೋಗ ಇಲ್ಲದೆ, ತುತ್ತು ಅನ್ನಕ್ಕೂ ಗತಿ ಇಲ್ಲದೆ ಪರಿತಪಿಸುತ್ತಿದ್ದಾರೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಕೊರೋನಾದ ಹೆಸರಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಜೆಡಿಎಸ್ ರಾಜ್ಯ ನಾಯಕ ಎಸ್.ಎಲ್.ಭೋಜೇಗೌಡ ಹೇಳಿದರು.
ಅವರು ಭಾನುವಾರ ಹೆಬ್ರಿಯ ವಿನೂ ನಗರದಲ್ಲಿ ಜೆಡಿಎಸ್ ಪಕ್ಷದ ನೂತನ ಕಛೇರಿ ಉದ್ಘಾಟಿಸಿ ಮಾತನಾಡುತ್ತ.
ಮುಖ್ಯಮಂತ್ರಿ ಯಾಗಿ ಕುಮಾರಸ್ವಾಮಿ ಅವರು ಸಾಕಷ್ಟು ಜನಪರವಾದ ಶಾಶ್ವತ ಯೋಜನೆ ಜಾರಿಗೆ ತಂದಿದ್ದಾರೆ. ಜನತೆ ನಿಶ್ಚಿಂತೆಯಿಂದ ಬದುಕಲು ಜೆಡಿ ಎಸ್ ಬೇಕು. ಜನರೊಂದಿಗೆ ನಿರಂತರವಾಗಿ ನಾವು ಇದ್ದೇವೆ. ಕಾರ್ಕಳ ಕ್ಷೇತ್ರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ ಪಕ್ಷವನ್ನು ಬಲಪಡಿಸಿ ಎಂದು ಭೋಜೇಗೌಡ ಮನವಿ ಮಾಡಿದರು
ಬಿಜೆಪಿಯವರ ದುರಾಡಳಿತ ಮತ್ತು ಭ್ರಷ್ಟಾಚಾರ ವನ್ನು ಜನರ ಮುಂದಿಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ. ದುಡಿಯುವ ಕ್ಯೆಗಳಿಗೆ ಉದ್ಯೋಗ ಇಲ್ಲ. ಕ್ರಷಿಕರು, ಕಾರ್ಮಿಕರು ಸೇರಿ ಜನತೆ ಕಷ್ಟ ದಲ್ಲಿ ಇದ್ದಾರೆ. ಕಾರ್ಮಿಕರು, ಮಡಿವಾಳ, ಸವಿತಾ ಸಮಾಜ, ರಿಕ್ಷಾ ಚಾಲಕರಿಗೆ ಪ್ಯಾಕೇಜ್ ನೆರವು ನೀಡುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಆದರೆ ಈ ತನಕ ಯಾರಿಗೂ ಪ್ಯಾಕೇಜ್ ತಲುಪಿಲ್ಲ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ಯೋಜನೆಗಳು ಎಲ್ಲವೂ ಕೇವಲ ಘೋಷಣೆಗೆ ಸಿಮೀತವಾಗಿದೆ ಎಂದು ಭೋಜೇಗೌಡ ಆರೋಪಿಸಿದರು. ಕೊರೊನಾ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ನರ್ಸರಿಯಿಂದ 9ನೇ ತರಗತಿಯ ತನಕ ಶಾಲೆ ಆರಂಭಿಸಲು ಶಾಲೆ ಆರಂಬಿಸಲು ಇನ್ನೂ ಕಾಲ ಪಕ್ವ ಆಗಿಲ್ಲ.
ಹೆಬ್ರಿ ಕಾರ್ಕಳದ ಗ್ರಾಮೀಣ ಪ್ರದೇಶದ ಸಮಾಜಸೇವಕ ಕುಚ್ಚೂರು ಶ್ರೀಕಾಂತ್ ಪೂಜಾರಿ ಅತ್ಯುತ್ತಮ ಜನಸೇವಕ ಅವರ ಕ್ಯೆ ಬಲ ಪಡಿಸುವ ಮೂಲಕ ಕಾರ್ಕಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬೆಳೆಸಿ ಎಂದು ಭೋಜೇಗೌಡ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ದೇಶದಲ್ಲೇ ಮೊದಲ ಭಾರಿಗೆ ದಾಖಲೆಯ ಸಾಲ ಮನ್ನಾ ವನ್ನು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಮಾಡಿ ಕ್ರಷಿಕರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ರೈತರು ಇನ್ನೂ ಸಾಲವೇ ಮಾಡಬಾರದು ಆ ರೀತಿಯ ಯೋಜನೆ ರೂಪಿಸುವ ಕನಸು ಕುಮಾರಸ್ವಾಮಿ ಕಂಡಿದ್ದರು.
ಆದರೆ ಅವರಿಗೆ ಮುಖ್ಯಮಂತ್ರಿ ಯಾಗಿ ಜನಸೇವೆ ಮಾಡಲು ಅವಕಾಶವನ್ನು ತಪ್ಪಿಸಲಾಯಿತು. ಆದರೆ ಬಿಜೆಪಿ ಸರ್ಕಾರ ಎನೂ ಮಾಡದೇ ಕೇವಲ ಪ್ರಚಾರಗಳ ಮೂಲಕ ಜನರನ್ನು ಮರಳು ಮಾಡುತ್ತಿದೆ. ಜನರಿಗೆ ಕೊರೊನಾದ ದಯನೀಯ ಸ್ಥಿತಿಯಲ್ಲೂ ವಿದ್ಯುತ್ ಬಿಲ್ ಏರಿಸಿದೆ. ಬಡವರ ಮನೆಗೆ ಉಚಿತ ವಿದ್ಯುತ್ ನೀಡಿ ಬಡವರ ಕಣ್ಣೀರು ಒರೆಸುವ ಕೆಲಸವಾದರೂ ಮಾಡಿ ಎಂದು ಯೋಗೀಶ್ ಶೆಟ್ಟಿ ಮನವಿ ಮಾಡಿದರು.
ಕಾರ್ಕಳ ಕ್ಷೇತ್ರದ ಜೆಡಿಎಸ್ ನೂತನ ಅಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಅಧಿಕಾರ ಸ್ವೀಕರಿಸಿ ಮಾತನಾಡಿ ಪಕ್ಷವನ್ನು ಬಲ ಪಡಿಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿ ಹೆಬ್ರಿಯ ನೂತನ ಕಚೇರಿಯ ಸ್ಥಾಪನೆಗೆ ಬೆಂಬಲಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಹೆಬ್ರಿಯ ಜೆಡಿಎಸ್ ಕಛೇರಿಯನ್ನು ಸ್ಥಾಪಿಸಲು ಸ್ಥಳಾವಕಾಶ ನೀಡಿದ ಬೆಂಗಳೂರಿನ ಉದ್ಯಮಿ ಸೀತಾರಾಮ ಶೆಟ್ಟಿ ಅವರ ತಂದೆ ವೀರಣ್ಣ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಜೆಡಿಎಸ್ ಉಡುಪಿ ಜಿಲ್ಲಾ ವೀಕ್ಷಕ ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯ ಜಯರಾಮ ಆಚಾರ್ಯ, ಉಪಾಧ್ಯಕ್ಷ ವೆಂಕಟೇಶ್, ಕಿಶೋರ್ ಕುಂದಾಪರ, ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರ್, ಜಿಲ್ಲಾ ಯುವ ಘಟಕ ದ ಪ್ರಧಾನ ಕಾರ್ಯದರ್ಶಿ ಶಂಶುದ್ಧೀನ್, ರೈತ ಘಟಕ ದ ಪ್ರಕಾಶ ಶೆಟ್ಟಿ, ಬಿ.ಕೆ.ಮಹಮ್ಮದ್, ರಮೇಶ್ ಕುಂದಾಪುರ ಸಹಿತ ಜೆಡಿಎಸ್ ವಿವಿಧ ಘಟಕಗಳ ಪ್ರಮುಖರು, ಮುಖಂಡರು,ನಾಯಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ವೆಂಕಟೇಶ್ ನಿರೂಪಿಸಿ ಶ್ರೀಕಾಂತ್ ಪೂಜಾರಿ ಸ್ವಾಗತಿಸಿ ವಂದಿಸಿದರು.