ಎಚ್.ಆರ್.ಎಸ್ ಉಡುಪಿ ವತಿಯಿಂದ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ

ಉಡುಪಿ(ಉಡುಪಿ ಟೈಮ್ಸ್ ವರದಿ): ಹದಿನೇಳು ವರ್ಷಗಳಿಂದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಯಚರಿಸುವ ಸರಕಾರೇತರ ಸೇವಾ ಸಂಸ್ಥೆ ಎಚ್.ಆರ್.ಎಸ್ ವತಿಯಿಂದ ಇಂದು ಅಂಬ್ಯುಲೆನ್ಸ್’ನ್ನು ಲೋಕಾರ್ಪಣೆ ಮಾಡಲಾಯಿತು.

ಉಡುಪಿ ಜಿಲ್ಲಾ ಆಸ್ಪತ್ರೆಯ ರೆಸಿಡೆನ್ಸ್ ಡಾಕ್ಟರ್ ಚಂದ್ರಶೇಖರ್ ಅಡಿಗ, ಸರ್ಜನ್ ಸುದೇಶ್ ಕುಮಾರ್ ಅಂಬ್ಯುಲೆನ್ಸ್’ನ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಚಂದ್ರಶೇಖರ್ ಅಡಿಗ ಅವರು ಕೋರೊನಾ ಸೋಂಕು ಈ ದೇಶದ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಸಂಸ್ಥೆ ಕೈಜೋಡಿಸಿ ನಮ್ಮೊಂದಿಗೆ ಕಾರ್ಯಚರಿಸಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಸೇವೆ ಒದಗಿಸಲು ಇದ್ದ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ಅವರ ಪಾತ್ರ ಗಮನಾರ್ಹ‌. ಎಚ್.ಆರ್.ಎಸ್ ಕಾರ್ಯಕರ್ತರು ಮುಂಚೂಣಿ ಕಾರ್ಯಕರ್ತರಾಗಿದ್ದು ಎಲ್ಲರೂ ಕೂಡ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದರು.

ಅಝೀಜ್ ಉದ್ಯಾವರು ಅವರು ಪ್ರಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಎಚ್.ಆರ್.ಎಸ್ ಕಾರ್ಯಕರ್ತರು ನಡೆಸಿರುವ ಸೇವಾ ಕಾರ್ಯಗಳ ಕುರಿತು ಪರಿಚಯಿಸಿದರು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸಂಸ್ಥೆಯು ಹಲವು ವಿಭಾಗಗಳಲ್ಲಿ ಕಾರ್ಯಚರಿಸಿದೆ. ಮುಖ್ಯವಾಗಿ ರೋಗಿಗಳಿಗೆ ವೆಂಟಿಲೇಟರ್ ಬೆಡ್ ಒದಗಿಸುವಿಕೆ, ಆಯುಷ್ಮಾನ್ ಕಾರ್ಡ್ ಗಳ ಕುರಿತು ಮಾರ್ಗದರ್ಶನ, ಬ್ಲಡ್ ಪ್ಲೆಟ್ ಲೆಟ್ಸ್, ರಕ್ತದಾನ, ಸಾವಿರಾರು ಮಂದಿಗೆ ರೇಷನ್ ಕಿಟ್, ವೈದ್ಯರಿಂದ ಸಮಾಲೋಚನಾ ಸೇವೆ, ಅಂತ್ಯ ಸಂಸ್ಕಾರಕ್ಕೆ ಸಹಾಯ, ಅಂಬ್ಯುಲೆನ್ಸ್ ಸೇವೆ, ಮುಂಚೂಣಿ ಕಾರ್ಯಕರ್ತರಿಗೆ ಸುರಕ್ಷಾ ಸಾಧನಗಳನ್ನು ವಿತರಿಸಲಾಗಿದೆ. ಈ ಎಲ್ಲ ಕಾರ್ಯಗಳಿಗೆ ನಮಗೆ ಕುರಾನಿನ ಸೂಕ್ತವಾದ ‘ಒಬ್ಬ ವ್ಯಕ್ತಿಯ ಜೀವ ಉಳಿಸಿದರೆ ಇಡೀ ಮಾನವ ಕುಲದ ಜೀವ ಉಳಿಸಿದಂತೆ’ ಎಂಬುವುದು ಪ್ರೇರಣೆಯಾಗಿದೆ ಎಂದರು.

ಎಚ್.ಆರ್.ಎಸ್ ಕ್ಯಾಪ್ಟನ್ ಅಮೀರ್ ಅವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಾಮೀಯಾ ಮಸೀದಿಯ ಅಧ್ಯಕ್ಷರು ಅರ್ಶದ್, ಎಚ್.ಆರ್.ಎಸ್ ಉಡುಪಿ ಜಿಲ್ಲಾ ಹೊಣೆಗಾರರಾದ ಹಸನ್ ಕೋಡಿಬೆಂಗ್ರೆ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬಿರ್ ಮಲ್ಪೆ, ಅನ್ವರ್ ಅಲಿ ಕಾಪು, ಮುಹಮ್ಮದ್ ರೆಹಾನ್ ಗಂಗೊಳ್ಳಿ, ಹಸನ್ ಮವಾಡ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!