ನಿಸ್ವಾರ್ಥ ಸೇವೆಯೇ ಉಸಿರೆಂದ : ಜನರ ಪ್ರೀತಿಯ “ಮಾಧವ”

ಬರಹ : ದಿವ್ಯ
ಉಡುಪಿ ಜೂ.9‌ (ಉಡುಪಿ ಟೈಮ್ಸ್ ವಿಶೇಷ ವರದಿ) : ಸೇವೆಯಲ್ಲಿ ದೇವರನ್ನು ಕಾಣು ಎನ್ನುವ ಮಾತೊಂದಿದೆ. ಆದರೆ ಪ್ರಸ್ತುತ ಸಮಾಜದಲ್ಲಿ ಈ ಗಾದೆ ಮಾತು ನೆನಪಿಗೆ ಬಂದಾಗೆಲ್ಲಾ ಎಷ್ಟು ಜನ ಈ ಮಾತನ್ನು ಪಾಲಿಸುತ್ತಿದ್ದಾರೆ ಅನ್ನೋ ಒಂದು ಪ್ರಶ್ನೆ ಹಾಗೇ ಮೆಲ್ಲನೇ ಹುಟ್ಟಿ ಕೊಳ್ಳುತ್ತದೆ. ಆದರೆ ಈಗಲೂ ಅನೇಕರು ಯಾವುದೇ ಸ್ವಾರ್ಥ ಇಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಾ ಸಮಾಜ ಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಅನ್ನೋದು ಖುಷಿಯ ವಿಚಾರ. ಅದೇ ರೀತಿ ಇಲ್ಲೋಬ್ಬರು ಕೂಡಾ ತಮ್ಮ ವಿಶಿಷ್ಟ ವಾದ ಸೇವೆ ಮೂಲಕ ಸುತ್ತ ಮುತ್ತಲ ಜನರ ಮನ ಗೆದ್ದಿದ್ದಾರೆ. ಇವರ ಸೇವೆ ಕಾಯಕವೇ ಕೈಲಾಸ ಎಂಬ ಗಾದೆ ಮಾತಿಗೆ ಹಿಡಿದ ಕೈಗನ್ನಡಿ ಯಂತಿದೆ. ಅಷ್ಟಕ್ಕೂ ಯಾರು ಅವರು, ಅವರು ಮಾಡುತ್ತಿರುವ ಸೇವೆ ಎಂತದ್ದು ಅನ್ಕೂತಿದ್ದೀರಾ ಹೇಳ್ತಿವಿ ಮುಂದೆ ಓದಿ……..

ಇವರ ಹೆಸರು ಮಾಧವ ಕಾಮತ್. ಕುಂಬಾಶಿ ಯವರಾದ ಇವರು,ಸದಾ ಲವಲವಿಕೆ ಸ್ವಭಾವದವರು,ತಾನೂ ನಗುತ್ತ ತನ್ನ ಸುತ್ತ ಮುತ್ತಲಿನವರನ್ನು ಸಂತೋಷವಾಗಿಡುವ ಇವರು ತಮ್ಮ ಪರಿಸರದಲ್ಲಿ ಇರುವ ಅಶಕ್ತರಿಗೆ ಬೇಕಾದ ಅಗತ್ಯ ಸೇವೆಯನ್ನು ಮನೆ ಬಾಗಿಲಿಗೆ ಒದಗಿಸುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಮನೆ ಮನೆ ಗೆ ತೆರಳಿ ಅಶಕ್ತರಿಗೆ ಅಗತ್ಯ ಸೇವೆ ನೀಡುವ ಇವರದ್ದು ಉಚಿತ ಸೇವೆ.

ಬ್ಯಾಂಕ್ ವ್ಯವಹಾರ, ಕರೆಂಟ್ ಬಿಲ್ ಪಾವತಿಸುವುದು, ಫೋನ್ ಬಿಲ್, ಆರ್ಟಿಸಿ ತೆಗೆಸಿಕೊಡುವುದು ಸ್ಟ್ಯಾಂಪ್ ಪೇಪರ್ ತಂದುಕೊಡುವುದು ಹಾಗೂ ದಿನಸಿ ಸಾಮಗ್ರಿಗಳು , ತರಕಾರಿ ಇತ್ಯಾದಿಗಳನ್ನು ತಂದುಕೊಡುವುದು ಹೀಗೆ ಮೊದಲಾದ ಕೆಲಸಗಳನ್ನು ಉಚಿತವಾಗಿ ಮಾಡಿಕೊಡುತ್ತಿದ್ದಾರೆ. ವೃದ್ದಾಪ್ಯ ವೇತನ, ವಿಧವಾ ವೇತನ ಪಡೆಯುವ ವಯೋ ವೃದ್ಧರು ಹಾಗೂ ಬ್ಯಾಂಕ್ ವ್ಯವಹಾರ ಅಷ್ಟೊಂದು ತಿಳಿಯದಿದ್ದರೂ ವ್ಯವಹಾರ ಇಟ್ಟುಕೊಂಡವರಿಗೆ ಇವರು ಸಹಕಾರ ನೀಡುವ ಮೂಲಕ ಅವರ ಪಾಲಿಗೆ ಆಶಾ ಕಿರಣವಾಗಿದ್ದಾರೆ.

ಜೀವನ ಪಯಣ: ದಿ. ಶ್ರೀನಿವಾಸ ಕಾಮತ್ ಹಾಗೂ ಪ್ರೇಮಾ ಕಾಮತ್ ದಂಪತಿಯ ಪುತ್ರನಾದ ಇವರು ಓದಿದ್ದು ನಾಲ್ಕನೇ ತರಗತಿ. ಹೊಟ್ಟೆಪಾಡಿನ ಜೀವನಕ್ಕಾಗಿ ಲಾಟರಿ ಮಾರಟ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಆದರೆ ಲಾಟರಿ ನಿಷೇಧ ಆದಾಗ ಒಮ್ಮೆಗೆ ಬದುಕಿನ ಬಂಡಿಯ ಪಯಣಕ್ಕೆ ದಿಕ್ಕೇ ತೋಚದಂತಾಗಿತ್ತು . ಆದರೂ ದೃತಿಗೆಡದೆ ಇವರು ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಸಹಕರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ ಜೀವನ ನಿರ್ವಹಣೆ ಗೆ ಮಕ್ಕಳ ಆಟಿಕೆ ಮಾರಾಟದ ಕಾಯಕವನ್ನೂ‌ ಆರಂಭಿಸಿದ್ದರು. ಜನರ ದೈನಂದಿನ ಅಗತ್ಯದ ಕಾರ್ಯಗಳಿಗೆ ಸಹಕರಿಸುವ ಮೂಲಕ ಅಶಕ್ತರಿಗೆ ನೆರವು ನೀಡುತ್ತಾ ನಿಸ್ವಾರ್ಥ ಸೇವೆಯಲ್ಲಿಯೇ ಸಂತೃಪ್ತಿ ಹೊಂದಿದ್ದಾರೆ.

ನೋಡಿ ಸ್ವಾಮಿ ನಾವಿರೋದೇ ಹೀಗೆ: ಇದು ಕಾಮತ್ ರ ಸ್ಟೈಲ್ ಯಾರು ಏನೇ ಹೇಳಿದರು ಅದನ್ನ ಮನಸ್ಸಿಗೆ ಹಚ್ಚಿಕೊಳ್ಳದೆ ತನ್ನದೇ ಶೈಲಿಯಲ್ಲಿ ಮಾತನಾಡುತ್ತ ಜನರೊಂದಿಗೆ ಬೆರೆಯುವ ಕಾಮತ್ , ಹಳೆಯ ಹಾಗೂ ಅಪರೂಪದ ನೋಟುಗಳು,ವಿಶೇಷವಾದ ಮಾಹಿತಿಯಿರುವ ಪತ್ರಿಕೆಯ ತುಣುಕುಗಳು, ತಮ್ಮ ಆರಾಧ್ಯ ದೇವರಾದ ಆನೆಗುಡ್ಡ ಗಣಪತಿಯ ಫೋಟೋಗಳನ್ನ ತನ್ನ ಪುಟ್ಟ ಚೀಲದಲ್ಲಿ ಇರಿಸಿಕೊಂಡು ಮುಂಜಾನೆ ಮನೆಯಿಂದ ಹೊರಟರೆಂದರೆ ಮತ್ತೆ ಸೇರುವುದು ಸಂಜೆಗೇನೇ. ಪೂರ್ತಿ ದಿನವನ್ನ ತನ್ನ ಪ್ರೀತಿಸುವ ಜನರ ಸೇವೆಗೆ ಪುಡುಪಾಗಿಟ್ಟ ಇವರದ್ದು ವಿಶೇಷ ವ್ಯಕ್ತಿತ್ವ.

ಇವರು ತಮ್ಮ ಸಮಾಜ ಸೇವೆಯ ಜೊತೆಗೆ ಕುಂಭಾಶಿ ಮತ್ತು ಆನೆಗುಡ್ಡೆ ವಿನಾಯಕ ಮತ್ತು ಸುತ್ತಮುತ್ತಲಿನ ಧಾರ್ಮಿಕ ಕಾರ್ಯಗಳಿಗೆ ಗೈಡರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಉಚಿತ ಸೇವೆಯನ್ನೇ ಜೀವನದ ಒಂದು ಭಾಗವಾಗಿ ನಿರ್ವಹಿಸುತ್ತಿದ್ದಾರೆ ಹಾಗೂ ತಮ್ಮ ಸೇವೆಯ ಬಗ್ಗೆ ಸಂತೃಪ್ತಿ ಹೊಂದಿದ್ದಾರೆ. ಇದರೊಂದಿಗೆ ಜನರು ತೋರಿಸುವ ಪ್ರೀತಿ ಗೌರವವೇ ತನ್ನ ಆಸ್ತಿ ಎನ್ನುವುದು ಇವರ ಅಭಿಪ್ರಾಯ.

ಇವರ ಈ ಕಾರ್ಯಕ್ಕೆ ಸುತ್ತಮುತ್ತಲಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಇವರು ಗ್ರಾಮದ ಜನರ ವಿಶ್ವಾಸಕ್ಕೂ ಪಾತ್ರರಾಗಿದ್ದಾರೆ. ಸಣ್ಣ ಸಣ್ಣ ಕೆಲಸಕ್ಕೂ ಟಿಪ್ಸ್ ಕೇಳುವ ಅನೇಕ ಮಂದಿಗೆ ಇವರ ನಿಸ್ವಾರ್ಥ ಸೇವೆ ಮಾದರಿಯಾಗಿದೆ.‌ ತಾವು ಬಡತನದ ಬೆಂಕಿಯಲ್ಲಿ ಬೆಂದರೂ ಇತರರಿಗೆ ಉಚಿತ ಸೇವೆ ನೀಡುವ ಇವರ ನಿಸ್ವಾರ್ಥ ಸೇವೆಯು ಅನೇಕ ಮಂದಿಗೆ ಸ್ಪೂರ್ತಿ ಜೊತೆಗೆ ಮಾದರಿಯಾಗಿದೆ.

ಯಾರಿಂದಲೂ ಬಿಡಿಗಾಸು ಬಯಸದೆ ತಮ್ಮ ಕೈಯಿಂದಾದ ಸೇವೆಯನ್ನು ಮಾಡುತ್ತಾ ಜನರ ಪ್ರೀತಿಗೆ ಪಾತ್ರರಾದವರು ಈ ಕಾಮತ್ ಮಾಮು…

Leave a Reply

Your email address will not be published. Required fields are marked *

error: Content is protected !!