ಜನರ ಆಶೀರ್ವಾದದಿಂದ “ಯುಐ” ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ- ನಟ ಉಪೇಂದ್ರ
ಉಡುಪಿ: ಚಿತ್ರನಟ ಹಾಗೂ ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರೊಂದಿಗೆ ಉಪೇಂದ್ರ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಉಪೇಂದ್ರ ಅವರನ್ನು ಸ್ವಾಮೀಜಿ ಗೌರವಿಸಿದರು. ಬಳಿಕ ಗೀತಾ ಮಂದಿರ ವೀಕ್ಷಿಸಿದ ಉಪೇಂದ್ರ, ಗೀತೋತ್ಸವ ಸಮಾರೋಪದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಲಹರಿ ವೇಲು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಉಪೇಂದ್ರ, ಜನಗಳ ಆಶೀರ್ವಾದದಿಂದ ಯು ಐ ಸಿನಿಮಾ ತುಂಬಾ ಚೆನ್ನಾಗಿ ಹೋಗುತ್ತಿದೆ. ರಜನಿಕಾಂತ್ ಜೊತೆ ನಟಿಸಿರುವ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇನ್ನೊಂದು ಶೆಡ್ಯೂಲ್ ಇದೆ. ಫೆಬ್ರವರಿ ಮಾರ್ಚ್ ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆ ಆಗಬಹುದು ಎಂದರು.
ಮನುಷ್ಯ ನಾನು ಅಂತ ಬಂದಾಗ ತುಂಬಾ ಸಫರ್ ಆಗುತ್ತಾನೆ. ನೀನು ಎಂದಾಗ ತುಂಬಾ ಹಗುರ ಆಗುತ್ತಾನೆ. ಇದರಲ್ಲೇ ಎಲ್ಲಾ ವಿಷಯಗಳು ಅಡಗಿವೆ. ನಮ್ಮೆಲ್ಲರನ್ನು ಒಂದು ಶಕ್ತಿ ತೆಗೆದುಕೊಂಡು ಹೋಗುತ್ತಿದೆ ಎಂಬ ಸತ್ಯದ ಅರಿವಾಗಿದೆ. ನಾನು ಏನು ಮಾಡುತ್ತಿಲ್ಲ ಅನ್ನುವುದು ನನಗೆ ಖಂಡಿತ ಗೊತ್ತಾಗಿದೆ ಎಂದು ಅವರು ತಿಳಿಸಿದರು.
ಶಿವರಾಜ್ ಕುಮಾರ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಆಗಿದೆ. ಸದ್ಯದಲ್ಲೇ ಅವರು ಬೆಂಗಳೂರಿಗೆ ಬರುತ್ತಾರೆ. ಆಗ ನಾನು ಅವರನ್ನು ಭೇಟಿಯಾಗುತ್ತೇನೆ. ಶಿವರಾಜ್ ಕುಮಾರ್ ಇನ್ನೂ ನೂರಾರು ಚಿತ್ರಗಳನ್ನು ಮಾಡಬೇಕು. ಅವರ ಜೊತೆ ನಾನು ಕೂಡ ಚಿತ್ರ ಮಾಡಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು.
ದೇವಳಗಳಿಗೆ ಭೇಟಿ: ಸಾಲಿಗ್ರಾಮ ದೇವಸ್ಥಾನಕ್ಕೆ ಉಪೇಂದ್ರ ಭೇಟಿ ನೀಡಿ, ತಮ್ಮ ಕುಲದೇವರಾದ ಶ್ರೀಗುರು ನರಸಿಂಹ ದೇವರಿಗೆ ಪೂಜೆಯನ್ನು ಸಲ್ಲಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್. ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಆಡಳಿತ ಮಂಡಳಿಯ ಸದಸ್ಯ ಕೆ.ಅನಂತ ಪದ್ಮನಾಭ ಐತಾಳ ಉಪಸ್ಥಿತರಿದ್ದರು.
ನಟ ಉಪೇಂದ್ರ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇವರು ತಮ್ಮ ಹುಟ್ಟೂರು ತೆಕ್ಕಟ್ಟೆ ಹಾಗೂ ಸಂಬಂಧಿಕರ ಮನೆಗೆ ಇದೇ ವೇಳೆ ಭೇಟಿ ಕೊಟ್ಟಿದ್ದಾರೆ.