ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ- ಆರ್ಥಿಕ ಸುಧಾರಣೆಯ ಹರಿಕಾರ ಇನ್ನಿಲ್ಲ!

ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ತುರ್ತು ಚಿಕಿತ್ಸಾ ವಿಭಾಗಕ್ಕೆ ಮನಮೋಹನ್ ಸಿಂಗ್ ಅವರನ್ನು ದಾಖಲಿಸಲಾಗಿತ್ತು.

ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಳಗಾವಿಯಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.

ಬೆಂಗಳೂರು : ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ, ಹಾಗೂ ನಾಳೆ (ಡಿ.27) ಸರಕಾರಿ ರಜೆ ಘೋಷಿಸಲಾಗಿದೆ. ಅಲ್ಲದೆ, ಅಲ್ಲದೆ, ಇಂದು (ಶುಕ್ರವಾರ) ರಾಜ್ಯದಲ್ಲಿ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ತನ್ನ ಗಣ್ಯ ನಾಯಕನ ಅಗಲಿಕೆಗೆ ಭಾರತ ಶೋಕತಪ್ತವಾಗಿದೆ ಎಂದು ಬರೆದಿದ್ದಾರೆ.

ಮನಮೋಹನ್ ಸಿಂಗ್ ಅವರ ಕೊಡುಗೆಗಳನ್ನು ಸ್ಮರಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಾಧಾರಣ ಹಿನ್ನೆಲೆಯಿಂದ ಬಂದಂತಹ ಮನಮೋಹನ್ ಸಿಂಗ್ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞನಾಗಿ ಬೆಳೆದರು. ವಿತ್ತ ಸಚಿವರಾಗಿ ಅವರು ಆರ್ಥಿಕ ನೀತಿಗಳಲ್ಲಿ ಛಾಪು ಮೂಡಿಸಿದ್ದಾರೆ. ಸಂಸತ್ತಿನಲ್ಲಿ ಅವರು ಒಳನೋಟವುಳ್ಳ ನಾಯಕನಾಗಿದ್ದರು. ನಮ್ಮ ಪ್ರಧಾನಿಯಾಗಿ ಅವರು ಜನಜೀವನವನ್ನು ಸುಧಾರಿಸುವುದಕ್ಕಾಗಿ ಶ್ರಮಿಸಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ಆರ್ಥಿಕ ಉದಾರೀಕರಣದ ಹರಿಕಾರರೆಂದೇ ಗುರುತಿಸಲ್ಪಡುವ ಮನಮೋಹನ್ ಸಿಂಗ್, ಮಿತಭಾಷಿ, ವಿನಮ್ರತೆಯೇ ಮೂರ್ತಿವೆತ್ತಂತಿದ್ದರು.

ಆರ್ಥಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮನಮೋಹನ್ ಸಿಂಗ್, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರ ಅಧಿಕಾರದ ಬಳಿಕ ಸುಧೀರ್ಘ 2 ಅವಧಿಗೆ ಸೇವೆ ಸಲ್ಲಿಸಿದ್ದ ಪ್ರಧಾನಿಯಾಗಿದ್ದಾರೆ. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಯೂ ಮನಮೋಹನ್ ಸಿಂಗರದ್ದೇ.

ಮನಮೋಹನ್ ಸಿಂಗ್ ಜೀವನ:

ಅವಿಭಜಿತ ಭಾರತದ ಪಂಜಾಬ್ (ಈಗ ಪಾಕಿಸ್ತಾನದಲ್ಲಿರುವ ಪಶ್ಚಿಮ ಪಂಜಾಬ್‌) ನ ಗಾಹ್‌ನಲ್ಲಿ 1932ರ ಸೆ.26 ರಂದು ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿ ಪುತ್ರನಾಗಿ ಮನಮೋಹನ್‌ ಸಿಂಗ್‌ ಜನಿಸಿದರು. ಮನಮೋಹನ್ ಸಿಂಗ್ ಅವರ ಕುಟುಂಬ 1947 ರಲ್ಲಿ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದಿತ್ತು.

ಕಿರಿಯ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡ ಮನಮೋಹನ್ ಸಿಂಗ್ ಬೆಳೆದಿದ್ದು ಅಜ್ಜಿ ಆರೈಕೆಯಲ್ಲಿ. ಉರ್ದು ಮಾಧ್ಯಮದಲ್ಲಿ ಆರಂಭಿಕ ಶಾಲಾ ಶಿಕ್ಷಣ ಪಡೆದಿದ್ದ ಮನಮೋಹನ್ ಸಿಂಗ್ 1948 ರಲ್ಲಿ ಕುಟುಂಬದವರೊಂದಿಗೆ ಅಮೃತಸರಕ್ಕೆ ಸ್ಥಳಾಂತರಗೊಂಡಿದ್ದರು. ಬಳಿಕ ಅಮೃತಸರದ ಹಿಂದೂ ಕಾಲೇಜಿನಲ್ಲಿ ಸಿಂಗ್ ಅಧ್ಯಯನ ಮಾಡಿದರು. ಪಂಜಾಬ್ ವಿಶ್ವವಿದ್ಯಾನಿಲಯ, ನಂತರ ಹೊಶಿಯಾರ್‌ಪುರದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಅಗ್ರಸ್ಥಾನದೊಂದಿಗೆ 1952 ಮತ್ತು 1954 ರಲ್ಲಿ ಕ್ರಮವಾಗಿ ಬಿಎ ಪದವಿ ಮತ್ತು ಎಂಎ ಸ್ನಾತಕೋತ್ತರ ಪದವಿಗಳನ್ನು ಪಡೆದರು.

1957 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಅರ್ಥಶಾಸ್ತ್ರದ ಟ್ರಿಪೋಸ್ ಅನ್ನು ಪೂರ್ಣಗೊಳಿಸಿದ ಸಿಂಗ್ ಭಾರತಕ್ಕೆ ಮರಳಿ ಪಂಜಾಬ್ ವಿಶ್ವವಿದ್ಯಾಲಯ ಹಾಗೂ ದೆಹಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

1960 ರಲ್ಲಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ DPhil ಪಡೆದ ಡಾ. ಸಿಂಗ್, ಅಲ್ಲಿ ಅವರು ನಫೀಲ್ಡ್ ಕಾಲೇಜಿನ ಸದಸ್ಯರಾಗಿದ್ದರು. ಆಕ್ಸ್‌ಫರ್ಡ್‌ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ನಂತರ, ಸಿಂಗ್ 1966-1969 ರ ಅವಧಿಯಲ್ಲಿ ವಿಶ್ವಸಂಸ್ಥೆಯಲ್ಲಿಯೂ ಕೆಲಸ ಮಾಡಿದ್ದರು.

1970 ರ ದಶಕ ಮತ್ತು 1980 ರ ದಶಕದಲ್ಲಿ, ಸಿಂಗ್ ಅವರು 1972-1976 ಅವಧಿಯಲ್ಲಿ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಯನ್ನು ನಿಭಾಯಿಸಿದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ (1982-1985), ಯೋಜನಾ ಆಯೋಗದ ಮುಖ್ಯಸ್ಥ (1985-1987) ನಂತಹ ಹಲವಾರು ಪ್ರಮುಖ ಹುದ್ದೆಗಳನ್ನು ಡಾ.ಸಿಂಗ್ ನಿರ್ವಹಿಸಿ ತಮ್ಮ ಛಾಪು ಮೂಡಿಸಿದ್ದರು.

ಇದಷ್ಟೇ ಅಲ್ಲದೇ 1987 ರಿಂದ ನವೆಂಬರ್ 1990 ರವರೆಗೆ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ಸೌತ್ ಕಮಿಷನ್‌ನ ಪ್ರಧಾನ ಕಾರ್ಯದರ್ಶಿಯಾಗಿಯೂ ಸಿಂಗ್ ಕಾರ್ಯನಿರ್ವಹಿಸಿದ್ದರು. 1990 ರಲ್ಲಿ ಜಿನೀವಾದಿಂದ ಭಾರತಕ್ಕೆ ಮರಳಿದ ಸಿಂಗ್, ಮಾಜಿ ಪ್ರಧಾನಿ ಚಂದ್ರಶೇಖರ್ ಅವಧಿಯಲ್ಲಿ ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದರು.

1991ರ ಮಾರ್ಚ್‌ನಲ್ಲಿ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷರಾದರು. ಈ ಬಳಿಕ 1991 ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 1994 ರಿಂದ 2004 ರವರೆಗೆ ಸಿಂಗ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಹಣಕಾಸು ಮಂತ್ರಿ (1991-1996)

1991 ರಲ್ಲಿ, ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ, ಡಾ ಸಿಂಗ್ ಅವರು ಪ್ರಧಾನ ಮಂತ್ರಿ ಪಿ.ವಿ.ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡರು. ನರಸಿಂಹರಾವ್ ಅವರ ಸರ್ಕಾರದಲ್ಲಿ ಆರ್ಥಿಕ ಕುಸಿತವನ್ನು ತಪ್ಪಿಸುವ ಕಾರ್ಯವನ್ನು ಅವರು ಜಾಗತಿಕ ಮಾರುಕಟ್ಟೆಗಳಿಗೆ ಭಾರತದ ಆರ್ಥಿಕತೆಯನ್ನು ತೆರೆಯುವ ವ್ಯಾಪಕ ಸುಧಾರಣೆಗಳನ್ನು ಪರಿಚಯಿಸುವುದರಲ್ಲಿ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು.

ಲೈಸೆನ್ಸ್ ರಾಜ್ ರದ್ದುಗೊಳಿಸಿದ್ದು, ವ್ಯಾಪಾರ ನೀತಿಗಳನ್ನು ಉದಾರೀಕರಣಗೊಳಿಸಿದ್ದು, ಹಣಕಾಸಿನ ಶಿಸ್ತು ನೀತಿಗಳು ಮನಮೋಹನ್ ಸಿಂಗ್ ಅವರ ಹೆಗ್ಗುರುತಾಗಿದೆ.

1991ರ ಬಜೆಟ್ ಭಾಷಣ

ವಿಕ್ಟರ್ ಹ್ಯೂಗೋವನ್ನು ಉಲ್ಲೇಖಿಸಿ, “ಭೂಮಿಯ ಮೇಲಿನ ಯಾವುದೇ ಶಕ್ತಿಯು ಅದರ ಸಮಯ ಬಂದಿರುವ ಕಲ್ಪನೆಯನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದ ಮನಮೋಹನ್ ಸಿಂಗ್ ಅವರ 1991 ರ ಬಜೆಟ್ ಭಾಷಣ ಭಾರತಕ್ಕೆ ಆರ್ಥಿಕ ಬೆಳವಣಿಗೆ ಹೊಸ ಯುಗವನ್ನು ಪರಿಚಯಿಸಿತ್ತು.

ಪುರಸ್ಕಾರಗಳು ಮತ್ತು ಜಾಗತಿಕ ಮನ್ನಣೆ

  • ಸಿಂಗ್ ಅವರನ್ನು ಹಲವು ಪ್ರಶಸ್ತಿ- ಪುರಸ್ಕಾರಗಳು ಅರಸಿಬಂದಿವೆ
  • ಪದ್ಮವಿಭೂಷಣ (1987)
  • ವರ್ಷದ ಹಣಕಾಸು ಮಂತ್ರಿಗಾಗಿ ಯುರೋಮನಿ ಪ್ರಶಸ್ತಿ (1993)
  • ವರ್ಷದ ಹಣಕಾಸು ಮಂತ್ರಿಗಾಗಿ ಏಷ್ಯಾಮನಿ ಪ್ರಶಸ್ತಿ (1993, 1994)
  • ಜವಾಹರಲಾಲ್ ನೆಹರು ಜನ್ಮ ಶತಮಾನೋತ್ಸವ ಪ್ರಶಸ್ತಿ (1995)

ಅವರ ಪಾಂಡಿತ್ಯಪೂರ್ಣ ಸಾಧನೆಗಳು ಮತ್ತು ಜಾಗತಿಕ ಪ್ರಭಾವವನ್ನು ಗುರುತಿಸಿ ಕೇಂಬ್ರಿಡ್ಜ್ ಮತ್ತು ಆಕ್ಸ್‌ಫರ್ಡ್ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳು ಅವರಿಗೆ ಗೌರವ ಡಾಕ್ಟರೇಟ್‌ಗಳನ್ನು ನೀಡಿವೆ


Leave a Reply

Your email address will not be published. Required fields are marked *

error: Content is protected !!