ಕುಂದಾಪುರ: ಯಕ್ಷಗಾನ ಚೌಕಟ್ಟು, ಸಂಪ್ರದಾಯದ ಎಲ್ಲೆ ಮೀರದಿರಲಿ- ಡಾ.ತಲ್ಲೂರು
ಕುಂದಾಪುರ ಡಿ.25(ಉಡುಪಿ ಟೈಮ್ಸ್ ವರದಿ): ಯಕ್ಷಗಾನ ಕಲಾವಿದರು ವೇಷತೊಟ್ಟು ರಂಗಸ್ಥಳಕ್ಕೆ ಬಂದಾಗ ತಾವು ನಿರ್ವಹಿಸುತ್ತಿರುವ ಪಾತ್ರದ ಘನತೆಯ ಬಗ್ಗೆ ಅರಿವಿರಬೇಕು. ಯಕ್ಷಗಾನ ಚೌಕಟ್ಟನ್ನು ಬಿಟ್ಟು ಮಾತಿನ ಎಲ್ಲೆ ಮೀರಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಹೇಳಿದ್ದಾರೆ.
ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ರಸರಂಗ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಹನುಮದ್ವಿಲಾಸ ಯಕ್ಷಗಾನದ ಪ್ರದರ್ಶನ ಹಾಗೂ ಸಾಧಕ ಕಲಾವಿದರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸ್ಯ. ಮನೋರಂಜನೆಗೆ ಯಕ್ಷಗಾನದ ಘನತೆಯನ್ನು ಕುಂದಿಸುವ ಕೆಲಸ ಆಗಬಾರದು. ಯಕ್ಷಗಾನದ 60 ವರ್ಷ ಮೇಲ್ಪಟ್ಟು ವೃತ್ತಿಪರ ಕಲಾವಿದರು, ನಿವೃತ್ತಿಯಾಗಿರುವ ಕಲಾವಿದರಿಗೆ ಅಕಾಡೆಮಿಯಿಂದ ಗೌರವ ಸಲ್ಲಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಭವಿಷ್ಯದಲ್ಲಿ ಪ್ರೇಕ್ಷಕರ ಕೊರತೆಯಾಗದಂತೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕು ಎನ್ನುವ ಮಹತ್ವಕಾಂಕ್ಷೆ ನಮ್ಮದಾಗಿದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಅವರಲ್ಲಿ ನೈತಿಕ ಮೌಲ್ಯಗಳನ್ನು, ಸಂಸ್ಕಾರವನ್ನು ತುಂಬುವದಕ್ಕೆ ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಈ ಉದ್ದೇಶದಿಂದ ಕಳೆದ 15 ವರ್ಷಗಳಲ್ಲಿ ನೈತಿಕ ಮೌಲ್ಯಗಳನ್ನು ಸಾರುವ 20ಕ್ಕೂ ಅಧಿಕ ಕೃತಿಗಳನ್ನು ಬರೆದು ಪ್ರಕಟಿಸಿ 40,000 ಅಧಿಕ ಪ್ರತಿಗಳನ್ನು ಶಾಲಾ ಕಾಲೇಜುಗಳಿಗೆ ತೆರಳಿ ಉಚಿತವಾಗಿ ಹಂಚಿದ್ದೇನೆ. ಇದೀಗ ಉಡುಪಿ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಶಾಲೆಗಳಲ್ಲಿ 3000ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಯಕ್ಷಗಾನದ ಉಳಿವಿನ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು.
ಹಾಗೂ ಹವ್ಯಾಸಿ ಕಲಾವಿದರು ಯಕ್ಷಗಾನ ಕಲೆಯ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುಧಾ ಮಣೂರು ಅವರು ರಸರಂಗ ಸಂಸ್ಥೆಯನ್ನು ಹುಟ್ಟು ಹಾಕಿ ಈ ಮೂಲಕ ಮಹಿಳಾ ಯಕ್ಷಗಾನ ಸಂಘಟನೆ ಮಾಡಿಕೊಂಡು ಅನೇಕ ಯಕ್ಷಗಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇಂತಹ ಸಂಸ್ಥೆಗಳಿಗೆ ಅಕಾಡೆಮಿ ನಿರಂತರ ಪ್ರೋತ್ಸಾಹ ನೀಡಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘಟಕ ಎಚ್. ಜನಾರ್ದನ ಹಂದೆ ಅವರು ಮಾತನಾಡಿ, ಯಕ್ಷಗಾನಕ್ಕೆ ಚಿಟ್ಟಾಣಿ ಅವರ ಮೂಲಕ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಕಲಾವಿದರೆಲ್ಲ ಹೆಮ್ಮೆ ಪಡುವಂತಹ ವಿಷಯವಾಗಿದೆ. ನೂರಾರು ಕಲಾವಿದರು ಇಲ್ಲಿ ತಮ್ಮ ಬದುಕನ್ನು ಕಂಡು ಕೊಂಡಿದ್ದಾರೆ. ಹೀಗಾಗಿ ಯಕ್ಷಗಾನವನ್ನು ಪ್ರೋತ್ಸಾಹಿಸುವುದು ಅತೀ ಅಗತ್ಯ ವಾಗಿದೆ ಎಂದವರು ತಿಳಿಸಿದರು .
ಈ ವೇಳೆ ರಸರಂಗದ ಮುಖ್ಯಸ್ಥೆ ಸುಧಾ ಮಣೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಸರಂಗವನ್ನು ಹುಟ್ಟುಹಾಕಿ ಯಕ್ಷ ಮಹಿಳಾ ಬಳಗವನ್ನು ಆರಂಭಿಸಿ ಕಳೆದ 15 ವರ್ಷಗಳಿಂದ 100ಕ್ಕೂ ಅಧಿಕ ಪ್ರದರ್ಶನವನ್ನು ಮುಂಬಯಿ , ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೀಡಿದ್ದೇವೆ. ಈ ಮೂಲಕ ಯಕ್ಷಗಾನ ಆಸಕ್ತ ಮಹಿಳೆಯರಿಗೆ ವೇದಿಕೆ ಕಲ್ಪಿಸಲಾಗಿದೆ. ನಮ್ಮ ಕೆಲಸಕ್ಕೆ ಅಕಾಡೆಮಿ ಸಹಿತ ಸಂಘ-ಸಂಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಂದಾರ್ತಿ ಮೇಳದ ಮೇಳದ ಹಿರಿಯ ಕಲಾವಿದ ಚಂದ್ರ ಕುಲಾಲ ನೀರ್ಜಿಡ್ಡು ಅವರಿಗೆ ಕಲಾ ಗೌರವ ನೀಡಿ ಗೌರವಿಸಲಾಯಿತು. ಜೊತೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಉದಯಕುಮಾರ್ ಹೊಸಾಳ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಭಾಗವತ ಉದಯಕುಮಾರ್ ಹೊಸಾಳ ಮತ್ತು ಬಳಗದಿಂದ ಹನುಮದ್ವಿಲಾಸ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಗಾನ ಪ್ರೇಮಿ ಮೋಹನ್ ಚಂದ್ರ, ರಸರಂಗದ ಮುಖ್ಯಸ್ಥೆ ಸುಧಾ ಮಣೂರು ಉಪಸ್ಥಿತರಿದ್ದರು.