ಉಡುಪಿ:ಕೊರಗರ ಉಚಿತ ಆರೋಗ್ಯ ತಪಾಸಣೆ ಶಿಬಿರ
ಉಡುಪಿ ಡಿ.09(ಉಡುಪಿ ಟೈಮ್ಸ್ ವರದಿ): ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಇವರ ಸಂಯೋಜನೆಯಲ್ಲಿ “ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ” ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯಗಳ ವಿರುದ್ಧ ಆಂದೋಲನ ಕಾರ್ಯಕ್ರಮ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಸಂಚಾರಿ ಗಿರಿಜನ ಆರೋಗ್ಯ ಪೆರ್ಡೂರು ಇವರ ಸಂಯೋಜನೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ಹೆಬ್ರಿ ಬಡಗುಡ್ಡೆಯಲ್ಲಿ ನಡೆಯಿತು.
ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಡಾ. ವಿದ್ಯಾ ರವರು ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೊರಗ ಸಮುದಾಯವು ಅಳಿವಿನಂಚಿಗೆ ಹೋಗದೆ ಇರುವ ಹಾಗೆ ಕಾಪಾಡುವುದು ಸಮುದಾಯದ ಜವಾಬ್ದಾರಿ ಇಂತಹ ತರಬೇತಿ, ಕ್ಯಾಂಪ್ ಗಳು ,ಬೀದಿ ನಾಟಕಗಳ ಮುಖಾಂತರ ಸಮುದಾಯದ ಜನರಿಗೆ ಜಾಗೃತಿ ಮೂಡಿಸುವುದು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸುವುದು ಬಹಳ ಬಹಳ ಅಗತ್ಯ. ಅಲ್ಲದೆ ರಕ್ತಹೀನತೆ, ಹೃದಯಘಾತ, ಕ್ಯಾನ್ಸರ್ ಇಂತಹ ಕಾಯಿಲೆಗಳು ಹೇಗೆ ಬರುತ್ತದೆ. ಇದರಿಂದ ಮುಕ್ತರಾಗಲು ನಾವು ಆಹಾರ ಶೈಲಿ, ಜೀವನ ಕ್ರಮ ಬದಲಾಯಿಸಿಕೊಳ್ಳಬೇಕು ಮತ್ತು ದುಶ್ಚಟಗಳಿಂದ ಮುಕ್ತರಾಗಿರಬೇಕು ಎಂದರು.
ಈ ವೇಳೆ ಹೆಬ್ರಿ ಪೊಲೀಸ್ ಠಾಣೆಯ ಎಎಸ್ಐ ದಯಾಕರ್ ಪ್ರಸಾದ್ ಅವರು ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ದೌರ್ಜನ್ಯ ಹಿಂಸೆ ಅದಿನಿಯಮ 2013, ಸಂಖ್ಯೆ 14ರ ಕುರಿತು ವಿವರಿಸಿದರು. 10 ಅಥವಾ 10 ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೆ ಆ ಸಂಸ್ಥೆಯ ಮಾಲೀಕರು ಮುಖ್ಯಸ್ಥರು ಕೆಲಸದ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು. ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳವಾದಾಗ ಅಪರಾಧಿಗಳಿಗೆ 5ರಿಂದ7 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗುವುದೆಂದು ತಿಳಿಸಿದರು. ಹಾಗೆ ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳು ಹಾಗೂ ಕಾನೂನು ಕ್ರಮಗಳ ಬಗ್ಗೆ, ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಮಹಿಳೆ ಮತ್ತು ಹೆಣ್ಣು ಮಕ್ಕಳ ಸಂದರ್ಭದಲ್ಲಿ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಕಾನೂನು ಕ್ರಮದ ಬಗ್ಗೆ ಮಾಹಿತಿ ನೀಡಿದರು. ಹಾಗೂ ವಿವಿಧ ಕಾಯಿದೆಗಳ ಬಗ್ಗೆ ಹಾಗೂ ಘಟನೆಗಳ ಬಗ್ಗೆ ತಿಳಿಸಿದರು.
ಇದೇ ವೇಳೆ ಹೆಬ್ರಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿರುವ ಸದಾಶಿವ ಸರ್ವೇಗಾರ್ ಇವರು ಮಾತನಾಡಿ, ಕಾಲ ಕಾಲಕ್ಕೆ ಸರ್ಕಾರದಿಂದಾಗುವ ಕಾನೂನು ಬದಲಾವಣೆಗಳನ್ನು ಇಲಾಖೆಗಳ ಮುಖಾಂತರ ತಿಳಿದುಕೊಳ್ಳಬೇಕು, ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕು ಇದರಿಂದ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಜೊತೆಗೆ ಶಿಕ್ಷಣ ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಇಲ್ಲಿಯೂ ಕೂಡ ಆರೋಗ್ಯದ ಬದಲಾವಣೆ ಕಾಣಲು ಸಾಧ್ಯ. ಸಂಘಟನೆಯೊಂದಿಗೆ ಪೋಲಿಸ್, ಆಸ್ಪತ್ರೆ, ಪಂಚಾಯತ್‌ಗ ಳೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ತಿಳಿಸಿದರು.
ನಂತರ ಹೆಬ್ರಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಸಂತೋಷ್ ಇವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಇರುವ ಉಚಿತ ವೈದ್ಯಕೀಯ ವ್ಯವಸ್ಥೆ ಮತ್ತು ಸೌಲಭ್ಯದ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ಆಸ್ಪತ್ರೆಯ ಡಾ.ಚಿದಾನಂದ, ದಿವಾಕರ್, ಪುತ್ರನ್ ಉಪಸ್ಥಿತರಿದ್ದರು.