ಉಡುಪಿ: “ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ”-ಕೊರಗರಿಂದ ಪಂಜಿನ ಮೆರವಣಿಗೆ
ಉಡುಪಿ ಡಿ.04(ಉಡುಪಿ ಟೈಮ್ಸ್ ವರದಿ): ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಮತ್ತು ಗೆಳೆಯರ ಬಳಗ ಕ್ರೀಡಾ ಸಂಘ ಕಳ್ತೂರು ಸಂತೆಕಟ್ಟೆ ಇವರ ಜಂಟಿ ಆಶ್ರಯದಲ್ಲಿ “ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ” ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಹಿಂಸೆ ದೌರ್ಜನ್ಯಗಳ ವಿರುದ್ಧ ಆಂದೋಲನ ಅಂಗವಾಗಿ “ಪಂಜಿನ ಮೆರವಣಿಗೆ”ಯನ್ನು ಸಂತೆಕಟ್ಟೆ ಸರ್ಕಲ್ನಲ್ಲಿ ಆಯೋಜಿಸಲಾಯಿತು.
38ನೇ ಕಳ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನವೀನ್ ಪೂಜಾರಿ ಇವರು ಡೋಲು ಬಾರಿಸಿ ಪಂಜನ್ನು ಹೊತ್ತಿಸುವ ಮೂಲಕ ಮೆರವಣಿಗೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಪಂಜಿನ ಮೆರವಣಿಗೆಯು ಸಂತೆಕಟ್ಟೆ ಸರ್ಕಲ್ ನಿಂದ ಕಳ್ತೂರು ಕೊರಗ ಗುಂಪಿನವರೆಗೆ ನಡೆಯಿತು. ಈ ವೇಳೆ 38ನೇ ಕಳ್ತೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ನವೀನ್ ಪೂಜಾರಿ, ಪಂಚಾಯತ್ ಸದಸ್ಯರಾದ ಉಷಾ ಪೂಜಾರಿ, ನಾಗೇಶ್ ನಾಯ್ಕ, ಜೊತೆಗೆ ರವಿ ಪೂಜಾರಿ, ಗಿರೀಶ್ ಕಾಮತ್ ಹಾಗೂ ಸಮುದಾಯ ಬಾಂಧವರು ಭಾಗವಹಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ನವೀನ್ ಪೂಜಾರಿ ಇವರು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಕೊರಗ ಸಮುದಾಯದ ಇಂತಹ ಕಾರ್ಯಕ್ರಮಗಳಿಗೆ ಯಾವಾಗಲೂ ಪ್ರೋತ್ಸಾಹ, ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಇದರ ಅಧ್ಯಕ್ಷರಾಗಿರುವ ಸುಶೀಲಾ ನಾಡ ಇವರು ವಿಶ್ವ ಮಾನವ ಹಕ್ಕುಗಳ ಕುರಿತು ಮತ್ತು ಸಂಘಟನೆಯ ಬಲವರ್ಧನೆಯ ಕುರಿತು ಹಾಗೆ ಒಕ್ಕೂಟದಿಂದ ನಡೆಯುತ್ತಿರುವ ಕಾರ್ಯಕ್ರಮಗಳು ತರಬೇತಿಗಳ ಕುರಿತು ವಿವರಿಸಿ ಭಾಗವಹಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೆಳೆಯರ ಬಳಗ ಕ್ರೀಡಾ ಸಂಘ ಕಳ್ತೂರು ಸಂತೆಕಟ್ಟೆ ಇದರ ಅಧ್ಯಕ್ಷರಾಗಿರುವ ಚಂದ್ರ ಕಳ್ತೂರು ಇವರು ಮಾತನಾಡಿ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಹಿಂಸೆ ದೌರ್ಜನ್ಯಗಳು ಮಹಿಳೆಯರಿಗೆ ಅರಿವಿಲ್ಲದೆ ದೌರ್ಜನ್ಯಗಳು ನಡೆಯುತ್ತದೆ. ಈ ತರಹದ ಹಿಂಸೆ ದೌರ್ಜನ್ಯಗಳ ಕುರಿತು ನಮ್ಮ ಒಕ್ಕೂಟವು ಹಲವಾರು ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಹಲವಾರು ಹೆಣ್ಣು ಮಕ್ಕಳು ಮಹಿಳೆಯರು ಭಾಗವಹಿಸಿ ತಮಗಾಗುವ ದೌರ್ಜನ್ಯಗಳ ಕುರಿತು ಅರಿತುಕೊಂಡಿದ್ದಾರೆ. ಇನ್ನೂ ಕೂಡ ಹಲವಾರು ಹೆಣ್ಣು ಮಕ್ಕಳಿಗೆ ಈ ಹಿಂಸೆ ದೌರ್ಜನ್ಯಗಳ ಕುರಿತು ಅರಿವಿಲ್ಲ , ಎಲ್ಲಾ ಮಕ್ಕಳು ಒಕ್ಕೂಟದಲ್ಲಿ ನಡೆಯುವ ತರಬೇತಿಗಳಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ನ ಅಧ್ಯಕ್ಷ ನವೀನ್ ಪೂಜಾರಿ ಹಾಗೂ ಸದಸ್ಯರಾದ ಉಷಾ ಪೂಜಾರಿ, ನಾಗೇಶ್ ನಾಯ್ಕ ಅವರು ಕೊರಗ ಸಮುದಾಯದವರೊಂದಿಗೆ ಸಹಭೋಜನ ಸವಿದು ಸಂಭ್ರಮಿಸಿದರು.