ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ- ತನಿಖೆಗೆ ಸರಕಾರ ಆದೇಶ
ಬೆಂಗಳೂರು, ನ.28 : ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ವಿಸ್ತ್ರತವಾಗಿ ವಿಶೇಷ ತನಿಖೆ ನಡೆಸಲು ರಾಜ್ಯ ಸರಕಾರ ಆದೇಶಿಸಿದೆ.
ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಸ್ಕ್ರ್ಯಾಪ್ ಯಂತ್ರೋಪಕರಣಗಳ ಮಾರಾಟದಲ್ಲಿ ನಿಯಮ ಬಾಹಿರ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರಕಲಂ 64ರ ಶಾಸನ ಬದ್ದ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಂಘಗಳ ಉಪ ನಿಬಂಧಕರು 2023ರ ನವಂಬರ್ 24ರಂದು ಕೋರಿದ್ದರು.
ಅದರಂತೆ ಕಾರ್ಖಾನೆಯ ಹಳೆಯ ಯಂತ್ರೋಪಕರಣ ಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ಪ್ರಸ್ತಾವ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿರುವ ಸರಕಾರವು ಈ ಕುರಿತು ವಿಸ್ತ್ರತವಾದ ತನಿಖೆ ನಡೆಸಲು ವಿಶೇಷ ವಿಚಾರಣೆ ನಡೆಸಲು ತೀರ್ಮಾನಿಸಿ ಆದೇಶ ಹೊರಡಿಸಿದೆ. ಹಾಗೂ ಈ ವಿಚಾರವಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಧಾಕೃಷ್ಣ ಹೊಳ್ಳರನ್ನು ವಿಚಾರಣಾ ಅಧಿಕಾರಿಯನ್ನಾಗಿ ಸರಕಾರ ನೇಮಿಸಿದೆ ಎಂದು ಮಾಧ್ಯಮ ವರದಿಯಿಂದ ತಿಳಿದು ಬಂದಿದೆ.
1965ರಿಂದ 2002-03ನೇ ಸಾಲಿನವರೆಗೆ 38 ವರ್ಷ ಕಬ್ಬು ಅರೆಯುವ ಕಾರ್ಯ ನಿರ್ವಹಿಸಿತ್ತು. 2003-04ರಿಂದ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿ, 2006ರ ಏಪ್ರಿಲ್ 16ರಿಂದ ಮುಚ್ಚಿದೆ. ಕಾರ್ಖಾನೆಯು 18 ವರ್ಷಗಳಿಂದ ಕಾರ್ಯ ನಿರ್ವಹಿಸದೆ ಸ್ಥಗಿತ ಗೊಂಡಿದ್ದರಿಂದ ಕಾರ್ಖಾನೆಯ ಯಂತ್ರೋಪಕರಣಗಳ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ದೂರು ಸಲ್ಲಿಸಿದ್ದರು. ಕಾರ್ಖಾನೆಯು ಹಳೆಯ ಯಂತ್ರೋಪಕರಣಗಳ ಸ್ಕ್ರ್ಯಾಪ್ ಮಾರಾಟ ಮಾಡಿದಾಗ ನಿಯಮಾನುಸಾರ ಕಾರ್ಖಾನೆಯಿಂದ ಇ-ವೇ ಬಿಲ್ ಗಳನ್ನು ಜನರೇಟ್ ಮಾಡಿಲ್ಲ. ಕಾರ್ಖಾನೆಯಿಂದ ಗೇಟ್ ಪಾಸ್‌ಗಳನ್ನೂ ಸಹ ವಿತರಣೆ ಮಾಡಿಲ್ಲ. ಹಾಗೂ ಯಾವ ಯಾವ ಯಂತ್ರೋಪಕರಣಗಳ ಸ್ಕ್ರ್ಯಾಪ್ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಅವುಗಳ ಪ್ರಮಾಣ ತೂಕದ ವಿವರ ದಾಸ್ತಾನುಗಳ ಪಟ್ಟಿ ಲಭ್ಯವಿಲ್ಲ. ಪ್ರತಿ ಲೋಡ್ ತೆಗೆದುಕೊಂಡು ಹೋದ ಬಗ್ಗೆ ಖರೀದಿದಾರರೇ ಇ-ವೇ ಬಿಲ್ ಮಾಡಿರುವುದು ಕಂಡು ಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಕಾರ್ಖಾನೆಯಿಂದ ತೆಗೆದು ಕೊಂಡು ಹೋದ ತೂಕದ ಪ್ರಮಾಣದ ವಿವರ ಸಹ ಕಾರ್ಖಾನೆಯಲ್ಲಿ ಲಭ್ಯವಿಲ್ಲ. ಟೆಂಡರ್ ಕರಾರಿನಂತೆ ಖರೀದಿದಾರರಿಂದ ಬ್ಯಾಂಕ್ ಗ್ಯಾರಂಟಿ ಪಡೆದಿಲ್ಲ. ಖರೀದಿದಾರರು ನಿಯಮಾನುಸಾ ರ ಜಿಎಸ್‌ಟಿ ಪಾವತಿಸಿಲ್ಲ. ಸಂಘದ 2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದಿಲ್ಲ. ಸಂಘದ ಆಡಳಿತ ಮಂಡಳಿಯು 2022-23ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪೂರ್ಣಗೊಳಿಸದೆ 2021-22 ಮತ್ತು 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಲು ವಿಫಲವಾಗಿದೆ. ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ29 ಸಿ ರೀತಿ ಆಡಳಿತ ಮಂಡಳಿಯ ಕರ್ತವ್ಯ ಲೋಪವಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
2023ರ ಸೆ.25ರಂದು ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆ ನಡೆದಿದ್ದು, ಈ ಸಭೆಯಲ್ಲಿ ಕಾರ್ಖಾನೆಯ ಯಂತ್ರೋಪಕರಣ ಹಾಗೂ ಕಟ್ಟಡ ಮಾರಾಟದಲ್ಲಿ ಅವ್ಯವಹಾರ ನಡೆದಿದ್ದು ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಪಾರದರ್ಶಕ ಕಾಯ್ದೆ ಅನುಸರಿಸಿಲ್ಲ. ಹಾಗೂ ಹಳೆಯ ಯಂತ್ರೋಪಕರಣ ಜಲಜಗಳ ಮಾರಾಟದ ನಂತರ ಅಗತ್ಯಕ್ಕಿಂತ ಹೆಚ್ಚಾಗಿ ಇ-ವೇ ಬಿಲ್ ಗೇಟ್ ಪಾಸ್ ನೀಡಿ ಅಕ್ರಮ ನಡೆಸಲಾಗಿದೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.
ಹಾಗೂ ಟೆಂಡರ್‌ದಾರರಿಂದ ನಿಯಮಾನುಸಾರ ಗ್ಯಾರಂಟಿ ಹಣ ಪಡೆದಿಲ್ಲ ಮತ್ತು ಮಾರಾಟ ಮಾಡಲಾದ ವಸ್ತುಗಳ ಬಾಬ್ತು ಜಿಎಸ್‌ಟಿ ಪಡೆದಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿ ಸಂಬಂಧಿಸಿದವರ ವಿರುದ್ದ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.