ಮಂಗಳೂರು: ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಯಾಗಬೇಕು : ರಾಜ ಬಿ. ಎಸ್.
ಉಡುಪಿ ನ.21(ಉಡುಪಿ ಟೈಮ್ಸ್ ವರದಿ): ವಾಣಿಜ್ಯ ವಿದ್ಯಾರ್ಥಿಗಳು ಪಠ್ಯ ಕಲಿಕೆಯೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಇದು ಮುಂದಿನ ಉದ್ಯೋಗದ ಸಂದರ್ಭದಲ್ಲಿ ಬಹಳ ಉಪಯೋಗವಾಗುತ್ತದೆ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್ ನ ಜನರಲ್ ಮ್ಯಾನೇಜರ್ ರಾಜ ಬಿ.ಎಸ್. ಅವರು ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗವು ಆಯೋಜಿಸಿದ ವಾಣಿಜ್ಯ ಸಂಘ ಮತ್ತು ಪ್ರಥಮ ವರ್ಷದ ಎಂ.ಕಾಂ. ವಿದ್ಯಾರ್ಥಿಗಳ ಫ್ರೆಷೆರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಆದ್ಯತೆಯೊಂದಿಗೆ ವರ್ತಮಾನದ ಕುರಿತು ವಿದ್ಯಮಾನಗಳನ್ನು ಗಮನಿಸಬೇಕು ಹಾಗೂ ವಿದ್ಯಾರ್ಥಿಗಳು ಇವತ್ತು ತಾವೇ ಸಂಪನ್ಮೂಲ ವ್ಯಕ್ತಿಗಳಾಗಬೇಕು ಮತ್ತು ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿಕೊಳ್ಳಬೇಕು. ಸಂವಹನ, ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ. ರಾಜು ಮೊಗವೀರ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ನಾಯಕರಾದ ಕಾರ್ತಿಕ್ ಎಸ್. ಮುಂದಿನ ವರ್ಷದ ವಾಣಿಜ್ಯ ಸಂಘದ ಕಾರ್ಯ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಪ್ರೊಫೆಸರ್. ವೈ. ಮುನಿರಾಜು, ಪ್ರೊಫೆಸರ್. ಈಶ್ವರ ಪಿ, ಪ್ರೊಫೆಸರ್. ವೇದವ ಪಿ. ಮತ್ತು ಪ್ರೊಫೆಸರ್. ಪರಮೇಶ್ವರ ಉಪನ್ಯಾಸಕರಾದ ಗುರುರಾಜ್ ಪಿ. ವೈಶಾಲಿ ಕೆ, ಡಾ. ದಿನಕರ ಕೆಂಜೂರು, ರಶ್ಮಿತಾ ಆರ್. ಕೋಟ್ಯಾನ್, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕಾವ್ಯ ಎಚ್.ಎಸ್. ಮತ್ತು ಮಹಮ್ಮದ್ ಆರೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.