ಶಿರ್ವ: ಮಹಿಳಾ ಮಂಡಲದಿಂದ ಕಲರವ ಕಾರ್ಯಕ್ರಮ

ಉಡುಪಿ ನ.16(ಉಡುಪಿ ಟೈಮ್ಸ್ ವರದಿ): 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿರ್ವ ಮಹಿಳಾ ಮಂಡಲ ಶಿರ್ವ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿನ್ನಲೆಯಲ್ಲಿ ಕಲರವ ಕಾರ್ಯಕ್ರಮ ನಡೆಯಿತು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.‌ ಬಳಿಕ ಮಾತನಾಡಿದ ಅವರು, ಶಿರ್ವ ಮಹಿಳಾ ಮಂಡಲದ 62 ವರ್ಷಗಳ ಸಾಧನೆ, ತಪಸ್ಸಿಗೆ ಫಲಶ್ರುತಿ ಎನ್ನುವಂತೆ ಇಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಈ ಯಶಸ್ಸಿನ ಹಿಂದೆ ಬಹಳಷ್ಟು ಮಾತೆಯರ ಶ್ರಮ, ತ್ಯಾಗ ಅಡಗಿದೆ. ಈ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳು ಹೀಗೇ ಮುಂದುವರಿಯಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿ, ಪ್ರಶಂಸೆಗಳು ಈ ಮಹಿಳಾ ಮಂಡಲಕ್ಕೆ ಸಿಗುವಂತಾಗಲಿ ಎಂದು ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಅವರು ಮಾತನಾಡಿ, ಶಿರ್ವ ಮಹಿಳಾ ಮಂಡಲಕ್ಕೆ ಸಿಕ್ಕಿರುವ ಈ ಪ್ರಶಸ್ತಿ ಇಡೀ ಶಿರ್ವ ಗ್ರಾಮಕ್ಕೇ ಸಂದ ಗೌರವವಾಗಿದೆ. ಶಿರ್ವ ಮಹಿಳಾ ಮಂಡಲದ ಅಸಂಖ್ಯ ಸಾಮಾಜಿಕ ಚಟುವಟಿಕೆಗಳು ಎಲ್ಲರಿಗೂ ಮಾದರಿಯಾಗಿವೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಯೂ ಈ ಸಂಸ್ಥೆಗೆ ಸಿಗುವಂತಾಗಲಿ ಎಂದು ಹಾರೈಸಿದರು. 

ಇದೇ ವೇಳೆ ಶಾಸಕರು ಮಹಿಳಾ ಮಂಡಲಕ್ಕೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿಶೆಟ್ಟಿ ಅವರಿಗೆ ಶಾಲು ಹೊದಿಸಿ , ಹೂಗುಚ್ಛ ನೀಡಿ ಅಭಿನಂದಿಸಿದರು. ಹಾಗೂ ವಾಸಂತಿ ಗೋಪಾಲ್, ಶ್ವೇತಾ ಗಿರೀಶ್, ಸುಮಾ ಬಾಮನ್, ಜಯಶ್ರೀ ಶೆಟ್ಟಿ, ಪುಷ್ಪಾ ಆಚಾರ್ಯ, ಪ್ರಮೀಳ, ಜ್ಯೋತಿ ಶೆಟ್ಟಿ , ಸುನೀತಾ ಸದಾನಂದ, ಅನಸೂಯಾ, ಶರ್ಮಿಳಾ ಮತ್ತು ಲತಾ ಶೆಟ್ಟಿ ಮುಂತಾದವರಿಂದ‌ ಕನ್ನಡ ನಾಡು ನುಡಿಯ ಕುರಿತಾಗಿ ಗೀತಾ ಗಾಯನ ಕಾರ್ಯಕ್ರಮ ಜರಗಿತು. ಜೊತೆಗೆ ಕಲರವ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಅಂಗನವಾಡಿಗಳ ಎಲ್ಲಾ ಪುಟಾಣಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಸುಂದರ ಪ್ರಭು, ಶ್ರೀಪತಿ ಕಾಮತ್, ಅಧ್ಯಕ್ಷ ವಿಟ್ಠಲ ಆಂಚನ್, ಶಿರ್ವ ಎಂಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ||ವೈ ಭಾಸ್ಕರ್ ಶೆಟ್ಟಿ, ಉದ್ಯಮಿ ಜಗದೀಶ್ ಅರಸ, ಎಂಎಸ್ ಆರ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಮಿಥುನ್  ಚಕ್ರವರ್ತಿ, ಉಪ ಪ್ರಾಂಶುಪಾಲೆ ನಿಶಾ ಶೆಟ್ಟಿ, ಶಕಿಲಾ ಶೆಟ್ಟಿ, ರೋಟರಿ ಕ್ಲಬ್ ಶಿರ್ವ ಇದರ ಮಾಜಿ ಅಧ್ಯಕ್ಷ ಡಾ.ವಿಟ್ಠಲ್ ನಾಯಕ್, ವಿಷ್ಣುಮೂರ್ತಿ ಸರಳಾಯ, ಶಿರ್ವ ಗ್ರಾಮದ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಗ್ರೇಸಿ ಕರ್ಡೋಜ, ಮಹಿಳಾ ಮಂಡಲದ ಉಪಾಧ್ಯಕ್ಷೆ ಗೀತಾ ಮೂಲ್ಯ , ಸಮಾಜ ಸೇವಕ ಅನಂತ್ರಾಯ ಶೆಣೈ, ಮಂಡಲದ ಗೌರವ ಸಲಹೆಗಾರರಾದ ಗೀತಾ ವಾಗ್ಳೆ, ಕಾರ್ಯದರ್ಶಿ ಐರಿನ್ ಪಿಂಟೋ, ಜಯಶ್ರೀ ಜಯಪಾಲ್ ಶೆಟ್ಟಿ ಮತ್ತು ಸುನೀತಾ ಕಳತ್ತೂರು, ವಿನಯಾ ಕುಂದರ್ , ಕೋಶಾಧಿಕಾರಿ ದೀಪಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!