ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದರೆ ಮಾತ್ರ ಶೋಷಿತ ಸಮುದಾಯಗಳು ಉಳಿಯಲು ಸಾಧ್ಯ-ಮಾವಳ್ಳಿ ಶಂಕರ್

ಉಡುಪಿ ನ.10 (ಉಡುಪಿ ಟೈಮ್ಸ್ ವರದಿ): ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದರೆ ಮಾತ್ರ ಇಲ್ಲಿನ ತಳ ಹಾಗೂ ಶೋಷಿತ ಸಮುದಾಯಗಳು ಉಳಿಯಲು ಸಾಧ್ಯ. ಇಲ್ಲದಿದ್ದರೆ ಮತ್ತೆ ಮನುಧರ್ಮ ನಮ್ಮ ಮೇಲೆ ದಾಳಿ ಮಾಡಿ, ಧಮನಕಾರಿ ನೀತಿಯನ್ನು ಹೇರಲಿದೆ ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದ ಗ್ರಹಣ ಪ್ರಯುಕ್ತ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಭೀಮ ಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತ, ನಮ್ಮ ದೇಶವು ಸಂವಿಧಾನದ ಆಧಾರದ ಮೇಲೆ ಮುನ್ನಡೆಯುತ್ತದೆಯೇ ಹೊರತು ಧರ್ಮ ಸಂಸತ್ ಆಧಾರದಲ್ಲಿ ಅಲ್ಲ. ದಲಿತ ಚಳವಳಿಯಲ್ಲಿ ಸೈದ್ಧಾಂತಿಕ ಬದ್ಧತೆ, ವೈಚಾರಿಕ ಚಿಂತನೆಯನ್ನು ಹೆಚ್ಚು ಹೆಚ್ಚು ಗಟ್ಟಿಗೊಳಿಸಬೇಕು. ಇಂದು ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಬಹಳ ಭೀಕರವಾಗಿ ಕಾಡುತ್ತಿದೆ. ಅದನ್ನು ಮರೆಮಾಚಲು ಧರ್ಮವನ್ನು ಮುನ್ನಲೆಗೆ ತಂದು ರಾಜಕೀಯ ಮಾಡುತ್ತಿದ್ದಾರೆ. ದಲಿತರು ಹಾಗೂ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಂಘಟಿತ ಚಳವಳಿಯನ್ನು ಕಟ್ಟಬೇಕಾಗಿದೆ ಎಂದರು.

ಅಂಬೇಡ್ಕರ್ ಅವರ ಹೋರಾಟವನ್ನು ಧಮನ ಮಾಡುವುದಕ್ಕಾಗಿಯೇ ಆರ್‌ಎಸ್‌ಎಸ್ ಸಂಘಟನೆ ಅಂದು ಹುಟ್ಟಿಕೊಂಡಿತ್ತು. ಆದರೆ ಇಂದು ಅನೇಕ ಹಿಂದುಳಿದ ಜಾತಿಗಳು, ಶೋಷಿತ ಸಮುದಾಯಗಳು ಆರ್‌ಎಸ್‌ಎಸ್‌ನ ಆಯುಧಗಳಿಗೆ ಬಲಿಯಾಗುತ್ತಿವೆ. ಧರ್ಮ ಹಾಗೂ ದೇಶಪ್ರೇಮದ ಹೆಸರಿನಲ್ಲಿ ಅವರು ಮಾಡುತ್ತಿರುವ ಅನ್ಯಾಯಗಳ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡಬೇಕು. ನಾವು ಅಧ್ಯಯಶೀಲತೆ, ವಿಚಾರವಂತಿಕೆ ಹಾಗೂ ವೈಚಾರಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ಚಳವಳಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.

ಹಾಗೂ ಕಾರ್ಯಕರ್ತರೇ ಚಳವಳಿಯ ನಿಜವಾದ ಜೀವಾಳ ಎಂದ ಅವರು, ದಲಿತ ಚಳವಳಿ ಎಂಬುದು ನಿರ್ದಿಷ್ಟ ಜಾತಿಗೆ ಸೀಮಿತವಾದ ಚಳವಳಿ ಅಲ್ಲ. ಈ ಸಮಾಜದಲ್ಲಿ ಜಾತಿ, ಧರ್ಮದ ಕಾರಣಕ್ಕಾಗಿ ಹಾಗೂ ಕೋಮು ಧ್ವೇಷಕ್ಕಾಗಿ ಅನ್ಯಾಯ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಜನರನ್ನು ಒಡಲಲ್ಲಿ ಇಟ್ಟುಕೊಂಡು ಈ ಚಳವಳಿ ಮುಂದುವರೆಯುತ್ತಿದೆ ಎಂದು ಅವರು ತಿಳಿಸಿದರು.

ಪೇಜಾವರ ಸ್ವಾಮೀಜಿ ಜಾತ್ಯತೀತ ದೇಶದ ಜಾತಿ ಗಣತಿ ಯಾಕೆ ಬೇಕು ಎಂಬುದಾಗಿ ಪ್ರಶ್ನಿಸುತ್ತಾರೆ. ಜಾತಿಗಣತಿ ಬಗ್ಗೆ ಪ್ರಶ್ನಿಸುವ ಇವರು, ಸಂವಿಧಾನದಲ್ಲಿ ಇಲ್ಲದ ಆರ್ಥಿಕವಾಗಿ ಹಿಂದುಳಿದವರ್ಗದವರಿಗೆ ನೀಡಿದ ಶೇ. 10ರಷ್ಟು ಮೀಸಲಾತಿಯನ್ನು ವಾಪಾಸ್ಸು ಕೊಡಲು ಸಿದ್ಧರಿದ್ದಾರೆಯೇ? ಎಂದು ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ರಾಜ್ಯ ಸರಕಾರಗಳು ಶಾಶ್ವತ ಹಿಂದುಳಿದವರ್ಗ ರಚಿಸಿ, ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡಿ, ಅದರ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಲು ಈ ಜಾತಿಗಣತಿ ನಡೆಸಲಾಗುತ್ತಿದೆ. ಜಾತಿಗಣತಿ ಎಂಬುದು ಎಲ್ಲ ಸಮುದಾಯಗಳ ಆರ್ಥಿಕ, ಸಾಮಾಜಿಕ ಸಮೀಕ್ಷೆಯಾಗಿದೆ ಎಂದು ಅವರು ಹೇಳಿದರು.

‘ಅಶೋಕ್ ಮಹಾರಾಜ ಬಿಹಾರದಲ್ಲಿ ಕಟ್ಟಿದ ಬುದ್ಧ ಗಯಾ ಇಂದು ವೈದಿಕರ ಕಪಿಮುಷಿಯಲ್ಲಿದೆ. ವಿವಿಧ ಧಾರ್ಮಿಕ ಕೇಂದ್ರಗಳು ಆಯಾ ಧರ್ಮದವರ ಹಿಡಿತದಲ್ಲಿರುವಂತೆ ಬುದ್ಧ ಗಯಾವನ್ನು ಬೌದ್ಧರ ಕೈಗೆ ಕೊಡಬೇಕು. ಆ ನಿಟ್ಟಿನಲ್ಲಿ ಧಾರ್ಮಿಕ ಕ್ರಾಂತಿ ಕಟ್ಟಬೇಕು. ನಾವು ಅಂಬೇಡ್ಕರ್ ಹೇಳಿರುವಂತೆ ಧರ್ಮವನ್ನು ಮುನ್ನಡೆಸಬೇಕು’ ಎಂದು ಅವರು ತಿಳಿಸಿದರು.

ದ.ಲೇ.ಕ. ಒಕ್ಕೂಟದ ರಾಜ್ಯ ಸಂಚಾಲಕ ಗ.ನ.ಅಶ್ವಥ್ ಮಾತನಾಡಿ, ಮೋದಿ ಸರಕಾರ ನಗರ ನಕ್ಸಲ್ ಎಂಬ ಹೆಸರಿನಲ್ಲಿ ವ್ಯವಸ್ಥೆಯನ್ನು ಪ್ರಶ್ನೆ ಮಾಡುವವರನ್ನು ಕೂಡ ಮಟ್ಟ ಹಾಕುವ ಕುತಂತ್ರ ಮಾಡುತ್ತಿದೆ. ನಮ್ಮ ಆಳುವ ಸರಕಾರಗಳು ಪ್ರಜಾಪ್ರಭುತ್ವಕ್ಕೆ ದ್ರೋಹ ಎಸಗುತ್ತಿದೆ. ಹಿಂದುಳಿದ ನಾಯಕರಾಗಿರುವ ಮೋದಿ, ಇಂದು ಮೈತುಂಬಾ ಕೋಮುಶಕ್ತಿ ತುಂಬಿ ಕೊಂಡಿರುವ ಸರಕಾರವನ್ನು ನಡೆಸು ತ್ತಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರು ಆಲೋಚನೆ ಮಾಡಬೇಕು. ದಲಿತ ಸಮಾವೇಶ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಬಾರದು. ದಲಿತರ ಮನೆ ಮನೆಗಳಲ್ಲಿ ನಾವು ಹೋರಾಟವನ್ನು ಕಟ್ಟಬೇಕು ಎಂದರು.

ದಸಂಸ ಮೈಸೂರು ವಿಭಾಗೀಯ ಸಂಚಾಲಕ ಹಾಲೇಶಪ್ಪ ಶಿವಮೊಗ್ಗ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ರಾಜ್ಯ ಸಮಿತಿ ಸದಸ್ಯ ಮಲ್ಲೇಶ್ ಅಂಬುಗ ಹಾಸನ ಅವರು ಭಾಗವಹಿಸಿದ್ದರು.

ಇದೇ ವೇಳೆ ಜನಪದ ಕಲಾವಿದ ಶಂಕರ್‌ ದಾಸ್ ಚೇಂಡ್ಕಳ, ಡಾ.ಗಣೇಶ್ ಗಂಗೊಳ್ಳಿ, ರವಿ ಬನ್ನಾಡಿ ಅವರಿಂದ ಹೋರಾಟದ ಹಾಡುಗಳ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕರುಣಾಕರ ಮಾಸ್ತರ್ ಮಲ್ಪೆ. ಸುಂದರ್ ಗುಜ್ಜರ್‌ಬೆಟ್ಟು, ಡಾ. ಪ್ರೇಮದಾಸ್, ಎಸ್.ಎಸ್.ಪ್ರಸಾದ್, ರಾಘವೇಂದ್ರ ಕೋಡಿ, ಗೀತಾ ಸುರೇಶ್ ಕುಮಾರ್, ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ ರಾಜ್ ಬಿರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!