ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಗೆ ವಿಯೆಟ್‌ನಾಮ್‌ನಲ್ಲಿ ಅಂತರಾಷ್ಟ್ರೀಯ ಗೌರವ
ಉಡುಪಿ ನ.10(ಉಡುಪಿ ಟೈಮ್ಸ್ ವರದಿ): ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಸುಸ್ಥಿರ ಆರೋಗ್ಯ ಸೇವೆಯನ್ನು ಉತ್ತೇಜಿಸುವಲ್ಲಿನ ಪ್ರವರ್ತಕ ಪ್ರಯತ್ನಗಳಿಗಾಗಿ ಗ್ಲೋಬಲ್ ಗ್ರೀನ್ ಮತ್ತು ಹೆಲ್ತಿ ಹಾಸ್ಪಿಟಲ್ಸ್ (ಜಿಜಿಹೆಚ್ ಹೆಚ್) ನೆಟ್ವರ್ಕ್ ನಿಂದ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಆಗ್ನೆಯ ಏಷ್ಯಾದ ಹಾನಿಯಿಲ್ಲದ ಆರೋಗ್ಯ ರಕ್ಷಣೆ ಸಂಸ್ಥೆ, ಆರೋಗ್ಯ ಪರಿಸರದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ. ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್, ಎಫ್.ಎಚ್.ಐ, ಯುನಿಸೆಫ್, ಯುಎನ್‌ಡಿಪಿ, ವಿಯೆಟ್‌ನಾಮ್‌ನ ಆರೋಗ್ಯ ಸಚಿವಾಲಯ, ಹೈ ಫಾಂಗ್ ಯೂನಿವರ್ಸಿಟಿ ಆಫ್ ಮೆಡಿಸಿನ್ ಅಂಡ್ ಫಾರ್ಮಸಿ ಮತ್ತು ವಿಯೆಟ್‌ನಾಮ್ ಆರೋಗ್ಯ ಪರಿಸರ ನಿರ್ವಹಣಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ ವಿಯೆಟ್‌ನಾಮ್‌ನ ಹೈ ಫಾಂಗ್ ಪಟ್ಟಣದಲ್ಲಿ ನಡೆದ ಹವಾಮಾನ ಬದಲಾವಣೆ ಮತ್ತು ಆರೋಗ್ಯದ ಕುರಿತಾದ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನ ಮತ್ತು 6ನೇ ಏಷ್ಯಾ-ಪೆಸಿಫಿಕ್ ಗ್ರೀನ್ ಹೆಲ್ತ್‌ಕೇರ್ ಸಿಸ್ಟಮ್ ಸಮ್ಮೇಳನದಲ್ಲಿ ಲೊಂಬಾರ್ಡ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಲೊಂಬಾರ್ಡ್ ಆಸ್ಪತ್ರೆಗೆ ಈ ಪ್ರತಿಷ್ಠಿತ ಅಂತರರಾಷ್ಟ್ರೀಯ ಗೌರವವು ಮಹತ್ವದ ಮೈಲಿಗಲ್ಲು ಮತ್ತು ನಾವು ಕರಾವಳಿ ಕರ್ನಾಟಕದಲ್ಲಿ ಪರಿಸರ ಸ್ನೇಹಿ. ಸುಸ್ಥಿರ ಆರೋಗ್ಯ ಸೇವೆಯತ್ತ ನಮ್ಮ ಪ್ರಯಾಣವನ್ನು ಮುಂದುವರಿಸುವಲ್ಲಿ ಸ್ಫೂರ್ತಿದಾಯಕವಾಗಿದೆ.” ಎಂದರು.
ಜೂನ್ 15, 1923 ರಂದು ಯುವ ಸ್ವಿಸ್ ಮಿಷನರಿ ಡಾ. ಇವಾ ಲೊಂಬಾರ್ಡ್ ಸ್ಥಾಪಿಸಿದ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ. 2024 ರಲ್ಲಿ ತನ್ನ 101 ನೇ ವಾರ್ಷಿಕೋತ್ಸವದಂದು ಆಸ್ಪತ್ರೆಯು ಪರಿಸರ ಸವಾಲುಗಳನ್ನು ಎದುರಿಸುವ ಮಹತ್ವಾಕಾಂಕ್ಷೆಯ ‘ಇನ್ಸ್‌ಪಾಯರ್ ‘ ಗ್ರೀನ್ ಹಾಸ್ಪಿಟಲ್ ಯೋಜನೆಯನ್ನು ಪ್ರಾರಂಭಿಸಿತು. ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ, ನೀರಿನ ಕೊರತೆ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಾಯು ಮಾಲಿನ್ಯವನ್ನು ನಿಭಾಯಿಸುವುದು, ಕ್ಯಾಂಪಸ್‌ನಲ್ಲಿ ಜೀವವೈವಿಧ್ಯವನ್ನು ಉತ್ತೇಜಿಸುವುದು ಮತ್ತು ಹವಾಮಾನದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದರ ಮೂಲಕ ಆಸ್ಪತ್ರೆಯ ಪರಿಸರ ಹೆಜ್ಜೆಗುರುತನ್ನು ಪರಿಹರಿವುದು ‘ಇನ್ಸಪಾಯರ್’ ಯೋಜನೆಯ ಸಮಗ್ರ ಕಾರ್ಯತಂತ್ರವಾಗಿದೆ.
ನವದೆಹಲಿಯ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ಮಾನ್ಯತಾ ಮಂಡಳಿಯಿಂದ ಪ್ರತಿಷ್ಠಿತ ಎನ್ ಎಬಿಹೆಚ್ ಪ್ರಮಾಣಿಕರಣ ಪಡೆದಿರುವ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯು ಭಾರತದಾದ್ಯಂತ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಸ್ಪತ್ರೆಗಳನ್ನು ಪ್ರೋತ್ಸಾಹಿಸುವ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (ಪಿಎಚ್‌ಎಫ್‌ಐ) ದ ಅಂಗ ಸಂಸ್ಥೆಯಾದ ಆರೋಗ್ಯ ಮತ್ತು ಪರಿಸರ ನಾಯಕತ್ವ ವೇದಿಕೆಯ ಭಾಗವಾಗಿದೆ.