ಉಡುಪಿ: ವಿಷ್ಣುಮೂರ್ತಿ ಪ್ರೆಂಡ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೌರವ

ಉಡುಪಿ ನ.05(ಉಡುಪಿ ಟೈಮ್ಸ್ ವರದಿ): ಸಮಾಜಿಕ ಕಳಕಳಿಯ ಸೇವೆಯ ಮೂಲಕ ಜನರ ಮನೆಮಾತಾಗಿರುವ ವಿಷ್ಣುಮೂರ್ತಿ ಪ್ರೆಂಡ್ಸ್ ಸಂಸ್ಥೆಗೆ ಈ ಬಾರಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಷ್ಣುಮೂರ್ತಿ ಪ್ರೆಂಡ್ಸ್ ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ದೊಡ್ಡಣಗುಡ್ಡೆ ಭಾಗದ ಯುವಕರು ಮತ್ತು ಹಿರಿಯರು ಸೇರಿ ಅಲ್ಲಿನ ಜನರಿಗೆ ಸಹಾಯ ಮತ್ತು ಸೇವೆಗಳ ಮೂಲಕ ಬೆಂಬಲವನ್ನು ನೀಡುತ್ತಿರುವ ಒಂದು ಸಾಮಾಜಿಕ ಸಂಘಟನೆ ಇದಾಗಿದೆ. ಈ ಸಂಘವು ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದು, ವಿಶೇಷವಾಗಿ 3 ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಕಾರ್ಯ, 2 ಮನೆಗೆ ಸಂಪೂರ್ಣ ವಿದ್ಯುತ್ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪಡೆಯಲು ಆರ್ಥಿಕ ವ್ಯವಸ್ಥೆಯನ್ನು ಮಾಡಿರುತ್ತಾರೆ. 

ಕುಟುಂಬದ ಆಧಾರಸ್ತಂಭ ಅಕಾಲಿಕವಾಗಿ ತೀರಿಕೊಂಡಾಗ ಆ ಕುಟುಂಬದ ಬೆನ್ನೆಲುಬಾಗಿ ಸಹಕರಿಸಿ ಧೈರ್ಯ ತುಂಬುವ ಕಾರ್ಯ ನಿರ್ವಹಿಸುವ ಮೂಲಕ ಆರ್ಥಿಕ ವ್ಯವಸ್ಥೆ ಮಾಡುವುದು ಮತ್ತು ಇತರ ರೀತಿಯ ಸಹಕಾರ ನೀಡಿದ ಬಹಳ ಉದಾಹರಣೆಗಳು  ಇವೆ. ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಉಚಿತ ರಕ್ತದಾನ ಶಿಬಿರ ನಡೆಸುವ ಮೂಲಕ ಬಹಳಷ್ಟು ಮಂದಿಗೆ ನೆರವಾಗಿದ್ದಾರೆ. ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಈ ಸಂಸ್ಥೆಯು ತನ್ನ ಕಾರ್ಯಕ್ರಮಗಳನ್ನು ಪಾರಂಪರಿಕ ಕಲೆಯ ಪ್ರದರ್ಶನ ಮತ್ತು ಅವುಗಳ ನಿರ್ವಹಣೆ ಮಾಡುವ ಮೂಲಕ ಕಲೆ ಹಾಗೂ ಕಲಾವಿದರ ಬಲಪಡಿಸುವ ಕೆಲಸ ಮಾಡಿಕೊಂಡು ಬಂದಿರುತ್ತದೆ. 

ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುವ ಮೂಲಕ ಜನರಿಗೆ ಸಹಾಯ ಮತ್ತು ಸಹಕಾರ ಮಾಡಿದ್ದಾರೆ. ಕ್ರೀಡಾಕೂಟ ಆಯೋಜಿಸಿ ಆ ಮೂಲಕ ಕ್ರೀಡಾಪಟುಗಳ ಬೆಂಬಲಕ್ಕೆ ನಿಲ್ಲುತ್ತಾ ಅದರ ಮೂಲಕ ಬಡವರ ಆರ್ಥಿಕ ಸ್ಥಿತಿ ಸುಧಾರಣೆ ಮಾಡಿಕೊಂಡು ಬಂದಿದೆ.

Leave a Reply

Your email address will not be published. Required fields are marked *

error: Content is protected !!