ಮಂಗಳೂರು: ನಕಲಿ ವಿಳಾಸ ನೀಡಿ ವಸ್ತು ಆರ್ಡರ್ ಮಾಡಿ ವಂಚನೆ-ಇಬ್ಬರು ಅರೆಸ್ಟ್

ಮಂಗಳೂರು ನ.02 : ನಕಲಿ ವಿಳಾಸ ನೀಡಿ ಭಾರೀ ಮೌಲ್ಯದ ಸೊತ್ತುಗಳನ್ನು ಆರ್ಡರ್ ಮಾಡಿ ಅಮೆಝಾನ್ ಕಂಪೆನಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ರಾಜ್‌ಕುಮಾರ್ ಮೀನಾ (23) ಮತ್ತು ಸುಭಾಷ್ ಗುರ್ಜರ್ (27) ಬಂಧಿತ ಆರೋಪಿಗಳು. ಆರೋಪಿಗಳಿಂದ ವಂಚಿಸಿ ಪಡೆದ ಸೊತ್ತುಗಳನ್ನು ಮಾರಾಟ ಮಾಡಿ ಲಭಿಸಿದ 11,45,000 ರೂ. ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳು ಅಮೆಝಾನ್‌ ನಲ್ಲಿ ವಿವಿಧ ಬೆಲೆಬಾಳುವ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರು. ಈ ವಸ್ತುಗಳನ್ನು ಪಡೆಯಲು ಬೇರೆ ಬೇರೆ ಕಡೆಯ ಸ್ಥಳಗಳ ವಿಳಾಸ ನೀಡುತ್ತಿದ್ದರು. ಅದರಂತೆ ಈ ವಸ್ತುಗಳನ್ನು ಪಡೆಯಲು ಆರೋಪಿಗಳು ವಿಮಾನದಲ್ಲೂ ಹೋಗಿ ಬರುವ ಚಾಳಿ ಹೊಂದಿದ್ದರು ಎನ್ನಲಾಗಿದೆ. ಹೀಗೆ ವಸ್ತುಗಳನ್ನು ಪಡೆಯಲು ವಸ್ತು ತುಂಬಿರುವ ಬಾಕ್ಸ್‌ಗಳ ಮೇಲಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ, ಅದನ್ನು ಪಡೆಯುವ ಮೂಲಕ ಅಮೆಝಾನ್ ಕಂಪೆನಿಗೆ ಕೋಟ್ಯಂತರ ರೂ. ವಂಚಿಸುತ್ತಿದ್ದರು ಎಂದು ಉರ್ವ ಪೊಲೀಸರು ಮಾಹಿತಿ ನೀಡಿದ್ದಾರೆ.

ವಸ್ತುಗಳು ಡೆಲಿವರಿಯಾದ ಬಳಿಕ ಅದರ ಮೇಲಿನ ಟ್ರ್ಯಾಕಿಂಗ್ ಲೇಬಲ್‌ಗಳನ್ನು ಕಡಿಮೆ ಬೆಲೆಯ ವಸ್ತುಗಳು ತುಂಬಿದ ಬಾಕ್ಸ್‌ಗಳ ಮೇಲೆ ಹಚ್ಚುತ್ತಿದ್ದರು. ಹಾಗೇ ದುಬಾರಿ ಬೆಲೆಯ ವಸ್ತುಗಳನ್ನು ತಮ್ಮಲ್ಲೇ ಇರಿಸಿಕೊಳ್ಳುತ್ತಿದ್ದರು. ಬಳಿಕ ಅದನ್ನು ಮಾರಾಟ ಮಾಡುತ್ತಿದ್ದರು. ಹೀಗೆ ದೇಶದ ನಾನಾ ಕಡೆಯ ನಗರಗಳ ವಿಳಾಸ ನೀಡಿ ಅಮೆಝಾನ್ ಕಂಪೆನಿಂದ 30 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಪಡೆದು ಬಳಿಕ ವಂಚಿಸಿರುವುದಾಗಿ ತಿಳಿದು ಬಂದಿದೆ.

ಈ ಆರೋಪಿಗಳು ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ವಿಳಾಸದಲ್ಲಿ ʼಅಮಿತ್ʼ ಎಂಬ ಹೆಸರಿನಲ್ಲಿ ಎರಡು ದುಬಾರಿ ಮೌಲ್ಯದ ಸೋನಿ ಕ್ಯಾಮೆರಾಗಳು ಮತ್ತು ಇತರ 10 ವಸ್ತುಗಳಿಗೆ ನಕಲಿ ವಿಳಾಸ ನೀಡಿ ಆರ್ಡರ್ ಮಾಡಿದ್ದರು. ಹೀಗೆ ಬಂದ ಸಾಮಗ್ರಿಗಳನ್ನು ಸ್ವೀಕರಿಸಿ ಬಳಿಕ ರಿಟರ್ನ್ ಮಾಡುವ ಸಂದರ್ಭ ತಪ್ಪು ಒಟಿಪಿ ಸಂಖ್ಯೆ ನೀಡಿದ ಕಾರಣ ಡೆಲಿವರಿ ದೃಢೀಕರಣದಲ್ಲಿ ವಿಳಂಬವಾಯಿತು. ಹಾಗಾಗಿ ಮರುದಿನ ಕ್ಯಾಮೆರಾಗಳನ್ನು ಪಡೆಯುವಂತೆ ರಾಜ್‌ ಕುಮಾರ್ ಮೀನಾ ಹೇಳಿದ್ದರಿಂದ ಅಮೆಝಾನ್ ಡೆಲಿವರಿ ಸಿಬ್ಬಂದಿಯು ವಾಪಸ್ ಮರಳಿದರು. ಅದಾದ ಬಳಿಕ ಆರೋಪಿಗಳು ಸೋನಿ ಕ್ಯಾಮೆರಾಗಳ ಆರ್ಡರ್ ರದ್ದುಗೊಳಿಸಿದಾಗ ಅನುಮಾನ ವ್ಯಕ್ತವಾಯಿತು. ಅಲ್ಲದೆ ಬಾಕ್ಸ್‌ಗಳನ್ನು ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಆರೋಪಿಗಳು ನಿಜವಾದ ಸೋನಿ ಕ್ಯಾಮೆರಾಗಳನ್ನು ತೆಗೆದು, ಬೇರೆ ವಸ್ತುಗಳನ್ನು ಬಾಕ್ಸ್‌ ನಲ್ಲಿಟ್ಟು ವಾಪಸ್ ನೀಡಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಬಗ್ಗೆ ಉರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!