ಶಿರ್ವ: ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ

ಶಿರ್ವ ಅ.30(ಉಡುಪಿ ಟೈಮ್ಸ್ ವರದಿ): ಶಿರ್ವ ಮಹಿಳಾ ಮಂಡಲ ಇವರ ಆಶ್ರಯದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಇವರ ಮಾರ್ಗದರ್ಶನದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ, ಸೈಂಟ್ ಮೇರಿಸ್ ಕಾಲೇಜು, ಶಿರ್ವ ಇವರ  ಸಹಯೋಗದೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮವು‌ ಶಿರ್ವದ ಸೈಂಟ್ ಮೇರೀಸ್ ಕಾಲೇಜ್ ನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ  ಡಾ.ಗಣನಾಥ್ ಎಕ್ಕಾರ್ ಅವರು‌ ಮಾತನಾಡಿ, ಇಂದಿನ ದಿನಗಳಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳಲ್ಲಿ ಭ್ರಷ್ಟಾಚಾರವು ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಯ ಕಬಂಧ ಬಾಹುಗಳು ಶಿಕ್ಷಣ, ಉದ್ಯೋಗ, ವ್ಯಾಪಾರೋದ್ಯಮ ,ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಲಂಚ ಕೊಡದೇ ಯಾವ ಕೆಲಸಗಳೂ ನಡೆಯುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಇದಕ್ಕೆ ಕಾರಣ ನಮ್ಮಂತಹ ಜನಸಾಮಾನ್ಯರು ವಿರೋಧಿಸದೇ, ಮಾತನಾಡದೇ ಸುಮ್ಮನಿರುವುದು ಹಾಗೂ ಚುನಾವಣೆಗಳಲ್ಲಿ ಸರಿಯಾದ ವ್ಯಕ್ತಿಗಳನ್ನು ಆರಿಸಿ ಕಳುಹಿಸದಿರುವುದು. ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತಿ ಹೊಂದಬೇಕು ಎಂದರು. ಹಾಗೂ ಲಂಚ ಕೊಡುವುದಿಲ್ಲ, ಲಂಚಕ್ಕಾಗಿ ಕೈಚಾಚುವುದಿಲ್ಲ ಎಂಬ ಪ್ರತಿಜ್ಞೆಯನ್ನು ಮಾಡುವುದರೊಂದಿಗೆ ದೃಢ ಸಂಕಲ್ಪದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಗುಲಾಬಿ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ ಶೆಟ್ಟಿ, ಮಹಿಳಾ ಮಂಡಲದ ಗೌರವ ಸಲಹೆಗಾರರಾದ ಗೀತಾ ವಾಗ್ಳೆ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಮೆಲ್ವಿನ್ ಕ್ಯಾಸ್ತಲಿನೋ, ಮಹಿಳಾ ಮಂಲದ ಕೋಶಾಧಿಕಾರಿ ದೀಪಾ ಶೆಟ್ಟಿ, ಸುನೀತಾ ಸದಾನಂದ್, ಪುಷ್ಪಾ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!