ಉಡುಪಿ: ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ

ಉಡುಪಿ: ಅಂಗವಿಕಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ, ಕೊಡವೂರು ದಿವ್ಯಾಂಗ ರಕ್ಷಣಾ ವೇದಿಕೆ, ಸಕ್ಷಮ ಸಂಸ್ಥೆ ಉಡುಪಿ ಹಾಗೂ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಧರಣಿ ನಡೆಸಲಾಯಿತು.

ಈ ವೇಳೆ  ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ ಮಾತನಾಡಿ, ರಾಜ್ಯದಲ್ಲಿ ಅಂಗವಿಕಲ ಹಕ್ಕುಗಳ ಕಾಯ್ದೆ ಆರ್‌ಪಿಡಬ್ಲ್ಯುಡಿ ಆ್ಯಕ್ಟ್ 2016ನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಬೇಕು. ವಿಶೇಷ ಚೇತನರಿಗೆ ಸರಕಾರದಿಂದ ನೀಡಲಾಗುತ್ತಿರುವ ಮಾಸಾಶನವನ್ನು ಪ್ರತಿ ತಿಂಗಳಿಗೆ ಶೇ.40-ಶೇ.75ರವರೆಗೆ ಕನಿಷ್ಠ 5000ರೂ. ಹಾಗೂ ಶೇ.75 ಮೇಲ್ಪಟ್ಟ ಅಂಗವಿಕಲರಿಗೆ 10,000ರೂ. ಒದಗಿಸಬೇಕು ಎಂದು ಆಗ್ರಹಿಸಿದರು.

ಎಂಡೋಸಲ್ಫಾನ್ ಪೀಡಿತರಿಗೆ ಪುನರ್ ಸಮೀಕ್ಷೆ ನಡೆಸಲು ಕೈಬಿಟ್ಟಿರುವ ಗ್ರಾಮಗಳಾದ ಉಪ್ಪುಂದ, ತಲ್ಲೂರು, ಉಪ್ಪಿನಕುದ್ರು, ಕಿರಿಮಂಜೇಶ್ವರ, ಹೆಮ್ಮಾಡಿ, ಕಟ್‌ಬೆಲ್ತೂರು, ನಾಗೂರು, ಮರವಂತೆ ನಾವುಂದ, ಗಂಗೊಳ್ಳಿ ಗ್ರಾಮಗಳನ್ನು ಎಂಡೋಸಲ್ಫಾನ್ ಪೀಡಿತ ಪ್ರದೇಶಗಳೆಂದು ಪರಿಗಣಿಸಲು ಸೂಕ್ತ ಕ್ರಮ ವಹಿಸಬೇಕು ಹಾಗೂ ನೆರೆಯ ಕೇರಳ ಸರಕಾರದ ಮಾದರಿಯಲ್ಲಿ ಸರಕಾರದ ಎಲ್ಲಾ ಸವಲತ್ತುಗಳನ್ನು ನೀಡಿ ಅದರ ಜೊತೆಗೆ ಅವರ ಕುಟುಂಬಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಹೀಮೊಫಿಲಿಯಾಕ್ಕೆ ಸಂಬಂಧಿಸಿದಂತೆ ಚುಚ್ಚುಮದ್ದಿಗಾಗಿ ಅನುದಾನವನ್ನು ಕಾದಿರಿಸಿ, ಚುಚ್ಚುಮದ್ದು ಸದಾಕಾಲ ಲಭ್ಯವಿರು ವಂತೆ ಕ್ರಮ ವಹಿಸಬೇಕು. ಅದನ್ನು ಎಲ್ಲ ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿಯೂ ಲಸಿಕೆ ದೊರೆಯುವಂತೆ ಮಾಡಬೇಕು. ಖಾಸಗಿ ಬಸ್‌ಗಳಲ್ಲಿ ವಿಕಲಚೇತನರಿಗೆ ಶೇ.50 ರಿಯಾಯಿತಿ ನೀಡುವ ಕ್ರಮವನ್ನು ಮತ್ತೆ ಜಾರಿಗೊಳಿಸಬೇಕು. ಖಾಸಗಿ ಹಾಗೂ ಸರಕಾರಿ ಕಚೇರಿಗಳಲ್ಲಿ ವಿಕಲಚೇತನರಿಗೆ ಪ್ರಥಮ ಆದ್ಯತೆಯಲ್ಲಿ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆಯನ್ನು ಕಡ್ಡಯವಾಗಿ ನಿರ್ವಹಿಸಬೇಕು ಎಂದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಈ ಕುರಿತು ಮನವಿಯನ್ನು ಸಲ್ಲಿಸಲಾಯಿತು. ಆರಂಭದಲ್ಲಿ ಮಣಿಪಾಲ ಕಾಯಿನ್ ಸರ್ಕಲ್‌ನಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಇದರಲ್ಲಿ ನೂರಾರು ಸಂಖ್ಯೆಯಲ್ಲಿ ಅಂಗವಿಕಲರು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು.

ಧರಣಿಯಲ್ಲಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ, ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಕುಂದಾಪುರ ತಾಲೂಕು ಅಧ್ಯಕ್ಷ ಸಂತೋಷ್ ಹೆಮ್ಮಾಡಿ, ಕಾರ್ಯದರ್ಶಿ ರವೀಂದ್ರ, ಕೊಡವೂರು ದಿವ್ಯಾಂಗ ರಕ್ಷಣಾ ವೇದಿಕೆಯ ಸಂಚಾಲಕ ವಿಜಯ ಕೊಡವೂರು, ಅಧ್ಯಕ್ಷ ಹರೀಶ್ ತೊಪ್ಪಲ ತೋಟ, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಪೃಥ್ವಿರಾಜ್ ಶೆಟ್ಟಿ, ಸಕ್ಷಮ ಸಂಸ್ಥೆಯ ಅಧ್ಯಕ್ಷೆ ಲತಾ ಭಟ್, ಎಪಿಡಿ ಸಂಸ್ಥೆಯ ಜಿಲ್ಲಾ ಸಂಚಾಲಕ ಹರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!