ಉಡುಪಿ: ಹುತಾತ್ಮರ ಬಲಿದಾನ ಶಾಂತಿ, ಸುವ್ಯವಸ್ಥೆಯ ಪ್ರತೀಕವಾಗಲಿ- ನ್ಯಾಯಾಧೀಶ ಕೆ.ಎಸ್. ಗಂಗಣ್ಣನವರ್

ಉಡುಪಿ ಅ.22(ಉಡುಪಿ ಟೈಮ್ಸ್ ವರದಿ): ಹುತಾತ್ಮರ ತ್ಯಾಗ ಮತ್ತು ಬಲಿದಾನಗಳು ನಮ್ಮ ದೇಶದ ಅಖಂಡತೆ ಮತ್ತು ಸಾರ್ವಭೌಮತೆಯನ್ನು ಎತ್ತಿ ಹಿಡಿಯಲು ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ ಎಸ್ ಗಂಗಣ್ಣನವರ್ ಅವರು ಹೇಳಿದರು. 

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮೃತರ ಗೌರವಾರ್ಥ ನಿರ್ಮಿಸಲಾದ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಮಾತನಾಡಿದ ಅವರು, ದೇಶವೆಂದರೆ ಕೇವಲ ಭೌಗೋಳಿಕ ವಸ್ತುಗಳಿಂದ ಆಗಿರುವಂತದಲ್ಲ ಬದಲಾಗಿ ಅದು ಎಲ್ಲಾ ರೀತಿಯ ಮಾನವ, ಪ್ರಾಣಿ ಹಾಗೂ ಸಸ್ಯ ಸಂಕುಲಗಳನ್ನು ಒಳಗೊಂಡ ವ್ಯವಸ್ಥೆ. ಈ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟ ಹುತಾತ್ಮರ ಬಲಿದಾನಗಳನ್ನು ನಾವು ನೆನೆದುಕೊಂಡು ಅದರ ಮೂಲಕ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಪ್ರತೀಕವಾಗಬೇಕು. ದೇಶ ಕಟ್ಟುವಲ್ಲಿ ಪ್ರತಿಯೊಬ್ಬರು ಕಾಯಾ ವಾಚಾ ಮನಸಾ ಕರ್ತವ್ಯ ನಿರ್ವಹಿಸಬೇಕು ಎಂದರು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಮಾತನಾಡಿ, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಒಟ್ಟು 216 ಜನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿ  ಕರ್ನಾಟಕದ ಐದು ಮಂದಿ ಅಧಿಕಾರಿಗಳು ಮತ್ತು ಸಿಬಂದಿಗಳು ಸೇರಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ, ಕರಾವಳಿ ಕಾವಲು ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಮಿಥುನ್ ಎಚ್ ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಟಿ ಸಿದ್ದಲಿಂಗಪ್ಪ, ಪಿ ಎ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!