ಶಿಕ್ಷಣದ ಉದ್ದೇಶ ಸಮಾಜದ ಔನ್ನತ್ಯಕ್ಕೆ ದಾರಿದೀಪವಾಗಬೇಕು : ಪ್ರೊ. ರಾಮ್ ರಾಮಸ್ವಾಮಿ

ಉಡುಪಿ ಅ.18: ಆರ್ಥಿಕ ಬೆಂಬಲ, ವ್ಯವಸ್ಥಿತ ಮೂಲಭೂತ ಸೌಕರ್ಯಗಳಿಲ್ಲದ ಪರಿಣಾಮ ದೇಶದ ಸಾರ್ವಜನಿಕ ವಿವಿ ಮತ್ತು ಶಿಕ್ಷಣ ಸಂಸ್ಥೆಗಳು ಬಲಹೀನವಾಗುತ್ತಿರುವುದು ಖೇಧಕರ ಎಂದು ಎಂದು ಹೈದರಾಬಾದ್‌ನ ಕೇಂದ್ರೀಯ ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತ ಜ್ಞಾನ ವಿಜ್ಞಾನ ಸಮಿತಿ ಉಡುಪಿ ಜಿಲ್ಲೆಯ ಆಶ್ರಯದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ಬಿಕ್ಕಟ್ಟುಗಳೊಡನೆ ವರ್ತಮಾನದ ಮುಖಾಮುಖಿ ಟೀಚರ್ ಶೈಕ್ಷಣಿಕ ಹಬ್ಬದಲ್ಲಿ ಮಾತನಾಡಿದ ಅವರು, ಶಿಕ್ಷಣದ ಉದ್ದೇಶ ಸಮಾಜದ ಔನ್ನತ್ಯಕ್ಕೆ ದಾರಿದೀಪವಾಗಬೇಕು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಹೀನವಾದರೆ ಗ್ರಾಮೀಣ ಭಾರತದ ವಿದ್ಯಾರ್ಥಿಗಳು, ಕೆಳಸ್ತರದ ಜನರು, ಮಹಿಳೆಯರು ಉನ್ನತ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು ಎಂದರು.

ಈ ವೇಳೆ ಶಿಕ್ಷಣ ತಜ್ಞ ಪ್ರೊ. ಮಹಾಬಲೇಶ್ವರ ರಾವ್ ಅವರು ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷಾ ಕೇಂದ್ರಿತ, ಅಂಕ ಪ್ರಧಾನ ಶಿಕ್ಷಣ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಕಡಿಮೆಯಾಗುತ್ತಿದೆ. ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ವಿರೋಸಿ ಇಂದಿನ ರಾಜ್ಯ ಸರಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚಿಸಿದ್ದು, ಕೇಂದ್ರ ಮತ್ತು ರಾಜ್ಯದ ನಡುವೆ ಸಂಘರ್ಷ ಆರಂಭವಾಗುತ್ತದೆ. ರಾಜಕೀಯ ವೈಮನಸ್ಸು. ಪೈಪೋಟಿಯಿಂದಾಗಿ ಪೋಷಕರು, ಶಿಕ್ಷಕರು, ಪಠ್ಯ ಕಲಿಯುವ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ ಎಂದರು.

ಕರ್ನಾಟಕ ಭಾರತ ಜ್ಞಾನ ವಿಜ್ಞಾನ ಸಮಿತಿ ಕೋಶಾಕಾರಿ, ಥೆಯರಿಟಿಕಲ್ ಕಂಪ್ಯೂಟರ್ ಸೈಂಟಿಸ್ಟ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಕಮಲ್ ಲೋದಯ ಅಧ್ಯಕ್ಷತೆ ವಹಿಸಿದ್ದರು.

ಟೀಚರ್ ಹಬ್ಬ ಉಡುಪಿ 2024 ರ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಪಿ. ವಿ. ಭಂಡಾರಿ ಸ್ವಾಗತಿಸಿದರು, ಪ್ರ. ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಅಭಿಲಾಷಾ ಹಂದೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತ್ ಬಾಬು, ಉದಯ ಗಾಂವ್ಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!