ಸಲ್ಮಾನ್ ಖಾನ್ ಹತ್ಯೆಗೆ ಸಂಚು- ಪೊಲೀಸ್ ಆರೋಪ ಪಟ್ಟಿಯಲ್ಲಿ ಬಯಲು

ಮುಂಬೈ ಅ.17: ಬಾಲಿವುಡ್ ನಟ ಸನ್ಮಾನ್ ಖಾನ್ ಹತ್ಯೆಗೆ ಕಿಡಿಗೇಡಿಗಳು ಸಂಚು ನಡೆಸಿರೋದು ಪೊಲೀಸ್ ಆರೋಪ ಪಟ್ಟಿಯಲ್ಲಿ ಬಯಲಾಗಿದೆ.

ಈ ಬಗ್ಗೆ  ನವಿ ಮುಂಬೈ ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ಅವರ ತೋಟದ ಬಳಿ ಕೊಲೆ ಮಾಡಲು ವ್ಯಕ್ತಿಯೊಬ್ಬನಿಗೆ 25 ಲಕ್ಷ ರೂ. ನಗದು ಹಾಗೂ ಪಾಕಿಸ್ತಾನದಿಂದ ಎ.ಕೆ. 47 ಬಂದೂಕು ತರಿಸಿ ಕೊಡಲಾಗಿತ್ತು ಎಂಬ ಅಂಶವನ್ನು  ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಆರೋಪ ಪಟ್ಟಿಯಲ್ಲಿ ಒಟ್ಟು ಐವರನ್ನು ಪೊಲೀಸರು ಹೆಸರಿಸಿದ್ದು, ಸದ್ಯ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಗುಂಪು ಈ ಸುಪಾರಿ ನೀಡಿತ್ತು. ಇವರು ಪಾಕಿಸ್ತಾನದಿಂದ ಎ.ಕೆ. 47, ಎ.ಕೆ. 92 ಹಾಗೂ ಎಂ 16 ಬಂದೂಕುಗಳನ್ನು ಹಾಗೂ ಟರ್ಕಿಯ ಝಿಂಗಾನಾ ಪಿಸ್ತೂಲ್ ಅನ್ನು ಖರೀದಿಸಲು ಸಿದ್ಧತೆ ನಡೆಸಿದ್ದರು. ಅಲ್ಲದೆ ಸಲ್ಮಾನ್ ಖಾನ್ ಹತ್ಯೆ ಮಾಡುವ ಸಲುವಾಗಿಯೇ 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಬಾಲಕರನ್ನು ಆರೋಪಿಗಳು ಸಜ್ಜುಗೊಳಿಸಿದ್ದು, ಇವರೆಲ್ಲರೂ ಪುಣೆ, ರಾಯಗಡ, ನವಿ ಮುಂಬೈ, ಥಾಣೆ ಹಾಗೂ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಾಂದ್ರಾದಲ್ಲಿರುವ ಮನೆ, ಪನ್ವೇಲ್‌ನಲ್ಲಿರುವ ತೋಟ ಹಾಗೂ ಗೋರೆಗಾಂವ್‌ನಲ್ಲಿರುವ ಫಿಲ್ಡ್‌ ಸಿಟಿಯಲ್ಲಿ ಸಲ್ಮಾನ್ ಖಾನ್ ಅವರ ಚಲನವಲನದ ಮೇಲೆ ನಿಗಾ ಇಡಲು ಬಹುತೇಕರನ್ನು ಈ ತಂಡ ನಿಯೋಜಿಸಿತ್ತು. ಸಲ್ಮಾನ್ ಹತ್ಯೆಗೆ ಈ ತಂಡ 2023ರ ಆಗಸ್ಟ್ ಹಾಗೂ 2024ರ ಏಪ್ರಿಲ್‌ನಲ್ಲಿ ಪ್ರಯತ್ನ ನಡೆಸಿತ್ತು ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಹರಿಯಾಣದ ಪಾಣಿಪತ್ ಬಳಿ ಬಂಧಿಸಲಾದ ಸುಕ್ಕಾ ಎಂಬಾತನಿಂದ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಶೂಟರ್ ಅಜಯ್ ಕಶ್ಯಪ್ ಹಾಗೂ ಇತರ ನಾಲ್ವರು ಈ ಯೋಜನೆಯಲ್ಲಿ ಭಾಗಿಯಾಗಿದ್ದರು. ಸಲ್ಮಾನ್‌ಗೆ ಇರುವ ಬಿಗಿ ಭದ್ರತೆ ಹಾಗೂ ಬುಲೆಟ್ ಪ್ರೊಫ್ ಕಾರನ್ನು ಭೇದಿಸಿ ಹತ್ಯೆಗಯ್ಯಲು ಈ ತಂಡ ಯೋಜನೆ ರೂಪಿಸಿತ್ತು. 

ಇದಕ್ಕಾಗಿ ಪಾಕಿಸ್ತಾನದಲ್ಲಿರುವ ಬಂದೂಕು ಪೂರೈಕೆದಾರರನ್ನು ವಿಡಿಯೊ ಕರೆ ಮೂಲಕ ಸಂಪರ್ಕಿಸಿತ್ತು. ಬಂದೂಕು ಖರೀದಿಗೂ ಮುನ್ನ ಅರ್ಧದಷ್ಟು ಹಣ ನೀಡುವುದು, ಪೂರೈಕೆ ನಂತರ ಉಳಿದ ಮೊತ್ತ ಕೊಡುವ ಒಪ್ಪಂದ ನಡೆದಿತ್ತು. ಕೆನಡಾದಲ್ಲಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಸೋದರ ಅನ್ನೋಲ್ ಬಿಷ್ಣೋಯಿ ಆದೇಶವನ್ನು ಇವರು ಕಾಯುತ್ತಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸಲ್ಮಾನ್ ಖಾನ್ ಹತ್ಯೆಗೈದು ಈ ತಂಡವು ಶ್ರೀಲಂಕಾಗೆ ದೋಣಿ ಮೂಲಕ ತಲುಪುವುದು. ಅಲ್ಲಿಂದ ಮುಂದೆ ಭಾರತದ ಪೊಲೀಸರು ತಲುಪಲಾಗದ ರಾಷ್ಟ್ರಕ್ಕೆ ಪಲಾಯನ ಮಾಡುವುದು ಇವರ ಯೋಜನೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!