ಕೊರಗ ಸಮುದಾಯದ ಮಾಣಿಕ್ಯ ಕಣ್ಮರೆ…

ಉಡುಪಿ ಮೇ.28(ಉಡುಪಿ ಟೈಮ್ಸ್ ವರದಿ): ಕೊರಗ ಸಮುದಾಯ ಜನರು ಇಂದು ಅನೇಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡು ಏಳಿಗೆಯತ್ತ ಒಂದೊಂದೆ ಹೆಜ್ಜೆ ಇಡುತ್ತಿದ್ದಾರೆ. ಸಮುದಾಯದ ಅನೇಕ ಯುವ ಪೀಳಿಗೆ ಉನ್ನತ ಶಿಕ್ಷಣ ಪಡೆದು ಸಮಾಜ ದಲ್ಲಿ ಕೊರಗ ಸಮುದಾಯವನ್ನು ಗುರುತಿಸುವಂತೆ ಮಾಡುತ್ತಿದ್ದಾರೆ. ಆದರೆ ಕೊರಗ ಜನಾಂಗದವರನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿದ್ದ ಅದೊಂದು ಸಮಯ ಇತ್ತು. ಇರಲು ಸ್ವಂತ ಸೂರಿಲ್ಲದೆ ಅವರಿವರ ಮನೆಯ ಚಾಕರಿ ಮಾಡಿಕೊಂಡು ಇರುತ್ತಿದ್ದ ಕಾಲ ಇತ್ತು. ಚಾಕರಿ ಮಾಡಿಸಿಕೊಳ್ಳುತ್ತಿದ್ದ ಜನರೇ ಕೊರಗರನ್ನು ತಮ್ಮ ಮನೆಯ ಅಂಗಳಕ್ಕೆ ಸೇರಿಸಿಕೊಳ್ಳುವುದಕ್ಕೂ ಹಿಂಜರಿಯುತ್ತಿದ್ದ ಸಮಯ ಅದು. ಆ ಸಮಯದಲ್ಲಿ ಕೊರಗರಿಗಾಗಿ ಸ್ವಂತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೊರಗರ ಮನದಲ್ಲಿ ಸಮುದಾಯದ ಅಭಿವೃದ್ಧಿಯ ಬೀಜ ಬಿತ್ತಿ ಸಮುದಾಯವನ್ನು ಒಂದುಗೂಡಿಸಿ ಒಗ್ಗಟ್ಟಾಗಿ ಹೋರಾಟ ನಡೆಸಿದ ಪ್ರತಿಫಲವೇ,ಇಂದು ಸಮಾಜದಲ್ಲಿ ಕೊರಗ ಸಮುದಾಯ ಒಂದು ಮಟ್ಟಿಗೆ ನೆಲೆ ಕಂಡುಕೊಂಡಿದೆ ಎಂದರೆ ತಪ್ಪಾಗಲಾರದು.

ಆದರೆ ಈ ಎಲ್ಲಾ ಹೋರಾಟಗಳಿಗೆ ಧ್ವನಿಯಾಗಿ ಸಮುದಾಯದ ಅಭಿವೃದ್ಧಿಗೆ ಹಗಲಿರುಳು ಶ್ರಮ ಪಟ್ಟವರಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಳ್ಳಿ ಗೋಕುಲ್‌ದಾಸ್ ಅವರು ಪ್ರಮುಖರು. ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಧರ್ಮೆಟ್ಟು ಎಂಬಲ್ಲಿ ತುಕ್ರ ಕೊರಗ ಹಾಗೂ ತೋಮು ದಂಪತಿಯ ಪುತ್ರನಾಗಿ 1931ರಲ್ಲಿ (ಶಾಲಾ ದಾಖಲೆಯಂತೆ 10.07.1936) ಜನಿಸಿದ್ದರು. ಪಳ್ಳಿಯಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷ ಣದ ಬಳಿಕ ಮಂಗಳೂರಿನ ಸರಕಾರಿ ಕಲಾ ವಿದ್ಯಾಲಯದಲ್ಲಿ ಅವರು ಪದವಿ ಶಿಕ್ಷಣ ಪಡೆದರು.

ಇವರು ಕೊರಗ ಸಮುದಾಯದ ಮೊಟ್ಟ ಮೊದಲ ಪದವೀಧರರಾಗಿದ್ದಾರೆ. ಗೋಕುಲ್ ದಾಸ್ ಅವರು, ಪದವಿ ಶಿಕ್ಷಣದಲ್ಲಿ ಕಲಿಯುತ್ತಿರುವಾಗಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರ ಜಾಣ್ಮೆಯನ್ನು ಕಂಡ ಇವರ ಶಿಕ್ಷಕರು ಇವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವಲ್ಲಿ ಸಹಕರಿಸಿದ್ದರು. ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಗೋಕುಲದಾಸ್ ಅವರು ನಿವೃತ್ತಿ ಜೀವನವನ್ನು ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಕಲೆಯುತ್ತಿದ್ದರು.

1958ರಲ್ಲಿ ಅಧಿಕೃತವಾಗಿ ಅಂಚೆ ಇಲಾಖೆಯ ನೌಕರನಾಗಿ ನಿಯುಕ್ತಿಗೊಂಡು ತಿರುಚಿನಾಪಳ್ಳಿ, ಮಣಪಾರೈ, ಕಾಸರಗೋಡು, ಶ್ರೀರಾಂಪೇಟೆ, ಮೈಸೂರು, ಬೆಂಗಳೂರು, ಮಂಗಳೂರು ಮೊದಲಾದೆಡೆ ಸೇವೆ ಸಲ್ಲಿಸಿ ಬಳಿಕ 1994ರಲ್ಲಿ ಬೆಳಗಾವಿಯಲ್ಲಿ ನಿವೃತ್ತರಾಗಿದ್ದರು. 1986ರಲ್ಲಿಯೇ ಕೊರಗ ಸಮುದಾಯದ ಸಂಘಟನೆಯ ಕಾರ್ಯ ಚಟುವಟಿಕೆಗಳು ಚಿಗುರೊಡೆ ಯಲಾರಂಭಿಸಿದ್ದವು. ಈ ಸಂಘಟನೆಗಳು ಗೋಕುಲ್ ದಾಸ್ ಅವರ ಮುಂದಾಳತ್ವ ಪಡೆದ ಬಳಿಕ ಬಲಪಡೆದುಕೊಂಡಿತು. 1989-90 ರ ಅವಧಿಯಲ್ಲಿ ಕಿನ್ನಿಗೋಳಿಯ ಗುತ್ತಕ್ಕಡ್ ನ ಭೂಮಿ ಚಳುವಳಿಯಲ್ಲಿ ಮೊದಲ ಬಾರಿಗೆ ಇವರು ಭಾಗವಹಿಸಿದ್ದರು.

1993 ಗೋಕುಲ್ ದಾಸ್ ಅವರು ಈ ಸಂಘಟನೆಯ ಮುಂದಾಳತ್ವ ಪಡೆದುಕೊಂಡ ಬಳಿಕ ಈ ಸಂಘಟನೆಯ ಹೋರಾಟ ಹೊಸ ಆಯಾಮ ಪಡೆದುಕೊಂಡಿತು. ಪ್ರತಿಯೊಂದು ಕೊರಗಕುಟುಂಬಕ್ಕೂ 2.5 ಎಕರೆ ಜಾಗ ಮಂಜೂರು ಮಾಡಿ ಕೊರಗರನ್ನು ಪುನರ್ವಸತಿ ಮಾಡಿಸಬೇಕು ಹಾಗೂ ಸೂಕ್ತ ತರಬೇತಿ ನೀಡಿ ಅವರಿಗೆ ಭೂಮಿಯಲ್ಲಿ ಕೃಷಿ ,ಬೇಸಾಯ ಮಾಡಿಕೊಂಡು ಬದುಕಲು ನೆಲೆ ಕಲ್ಪಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾಲಯದ ಪ್ರೊ. ಡಾ. ಮಹಮ್ಮದ್ ಪೀರ್ ವರದಿ ರಚಿಸುತ್ತಾರೆ.

ಈ ವರದಿಯ ಜಾರಿಗೆ ಆಗ್ರಹಿಸಿ 1993 ರ ಆಗಸ್ಟ್ ನಲ್ಲಿ ಗೋಕುಲ್ ದಾಸ್ ಅವರ ಮುಂದಾಳತ್ವದಲ್ಲಿ ಬೃಹತ್ ರ್ಯಾಲಿ ನಡೆಯಿತು.1997 ರಲ್ಲಿ ಮತ್ತೆ ಇವರ ಮುಂದಾಳತ್ವ ದಲ್ಲಿ ಸೂರಲ್ ಚಳುವಳಿ ನಡೆಸಿದ್ದರು. ಗೋಕುಲ್ ದಾಸ್ ಅವರ ಹೋರಾಟ ಫಲವಾಗಿ ‌ಅವಿಭಜಿತ ದ.ಕ ಜಿಲ್ಲೆಯ ಆಗಿನ ಉಸ್ತುವಾರಿ ಸಚಿವರಾಗಿದ್ದ ಜಯಪ್ರಕಾಶ್ ಹೆಗ್ಡೆ ಯವರು ಸಮುದಾಯದ ಬೇಡಿಕೆ ಯಂತೆ ಕೊರಗರಿಗೆ ಜಾಗ ಮಂಜೂರು ಮಾಡಿಕೊಡುವಲ್ಲಿ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದ್ದರು. ಅದಂತೆ ಅನೇಕರಿಗೆ ಭೂಮಿ ದೊರಕಿಸಿಕೊಡುವಲ್ಲಿ ಸಹಕರಿಸಿದ್ದರು.

ಇದರೊಂದಿಗೆ 2000 ದಲ್ಲಿ ಕಳತ್ತೂರು ಚಳುವಳಿ ಭೂಮಿಗಾಗಿನ ಹೋರಾಟದಲ್ಲಿ ಮುಂಚೂ ಣಿಯಲ್ಲಿ ಗುರುತಿಸಿಕೊಂಡಿದ್ದ ಗೋಕುಲ್‌ದಾಸ್ ಅವರು, ಕೊರಗ ಸಮುದಾಯಕ್ಕೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ನಡೆದ ಹೋರಾಟದ ನೇತೃತ್ವವನ್ನೂ ವಹಿಸಿದ್ದವರು. ಅಲ್ಲದೆ ತೀವ್ರವಾಗಿದ್ದ ಅಜಲು ಪದ್ಧತಿ ವಿರುದ್ಧದ ಆಂದೋಲನದ ಭಾಗವಾಗಿ ಗೋಕುಲದಾಸರು ದಿಲ್ಲಿಯಲ್ಲಿ ನಡೆದ ಮಾನವ ಹಕ್ಕುಗಳ ಆಯೋಗದ ಸಭೆಯಲ್ಲಿ ಹಾಜರಾಗಿ ಸಮುದಾಯದ ಪರವಾದ ಮಂಡಿಸಿದ್ದರು. ಸುದ್ದಿಗೋಷ್ಠಿ, ವಿಚಾರಗೋಷ್ಠಿ, ಚರ್ಚಾಗೋಷ್ಠಿ ಮೂಲಕ ಅಜಲು ಪದ್ಧತಿಯ ಅಪಾಯಗಳನ್ನು ಅವರು ಜನರ ಮುಂದಿರಿಸಿ ಹೋರಾಟ ಮಾಡಿದ್ದರು. ಸರಳ ಸಜ್ಜಣಿಕೆಯ ವ್ಯಕ್ತಿತ್ವ ಹೊಂದಿದ್ದ ಇವರು ನಿವೃತ್ತಿ ಬಳಿಕ ತಮ್ಮ ಪಿಂಚನಿ ಹಣವನ್ಮು ಸಮುದಾಯದ ಏಳಿಗೆಗಾಗಿಯೇ ವ್ಯಹಿಸಿದ್ದರು.

ಸಾಹಿತ್ಯಾಸಕ್ತರಾಗಿದ್ದ ಗೋಕುಲದಾಸ್ ಅವರು ಕವನ ಹಾಗೂ ಹಲವಾರು ಕ್ರಾಂತಿ ಗೀತೆಗಳನ್ನು ರಚಿಸಿದ್ದಾರೆ. ಮಾತೃಭಾಷೆ ಕೊರಗ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಕನ್ನಡ, ಇಂಗ್ಲಿಷ್ ಭಾಷೆಯಲ್ಲೂ ಹಿಡಿತ ಹೊಂದಿದ್ದರು. ಅಸ್ಪರ್ಶತೆಯ ಬೆಂಕಿಯಲ್ಲಿಯೇ ಬೆಳೆದು ಸಮುದಾಯದಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದವರು. ಇವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ ಹಾಗೂ ಕೊರಗ ಶ್ರೀ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೀಗ ಕೊರಗರ ಪಾಲಿನ ಮಾಣಿಕ್ಯರಾಗಿದ್ದ ಗೋಕುಲ್ ದಾಸ್ ಅವರು ಇಹ ಲೋಕ ತ್ಯಜಿಸಿದ್ದಾರೆ. ಕೊರಗರ ಅಸ್ಥಿತ್ವಕ್ಕೆ ಕಾರಣ ಕರ್ತರಾಗಿದ್ದ ಗೋಕುಲ್ ದಾಸ್ ಅವರು ಇಡೀ ಸಮುದಾಯವನ್ನು ಅಗಲಿ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. 90 ವರ್ಷ ವಯಸ್ಸಿನ ಅವರು ಕಳೆದ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮೇ.26 ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಇಡೀ ಕೊರಗ ಸಮುದಾಯವೇ ಸಂತಾಪ ಸೂಚಿಸಿದೆ.

ದಿವ್ಯ ಮಂಚಿ

Leave a Reply

Your email address will not be published. Required fields are marked *

error: Content is protected !!