ನಕಲಿ ದಾಖಲೆ ಸೃಷ್ಟಿಸಿ ಸಹಕಾರಿ ಸಂಘದಿಂದ ವಂಚನೆ ಆರೋಪ- ಬ್ರಹ್ಮಾವರ ಠಾಣಾ ಮೆಟ್ಟಲೇರಿದ ಸಂತ್ರಸ್ತರು

ಉಡುಪಿ‌ ಅ.09 : ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದು ಸ್ವಂತ ಬಳಕೆಗೆ ಉಪಯೋಗಿಸಿ ಲಕ್ಷಾಂತರ ರೂ. ವಂಚನೆ ಎಸಗಿ ಮೋಸ ಮಾಡಿರುವ ಮಲ್ಪೆ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಅಧ್ಯಕ್ಷರು, ವ್ಯವಸ್ಥಾಪಕ ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಹತ್ತು ಮಂದಿ ಸಂತ್ರಸ್ತರು ಬ್ರಹ್ಮಾವರ ಪೊಲೀಸ್ ಠಾಣೆಗೆ ಇಂದು ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಟಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂತ್ರಸ್ತರಾದ ಕೊಳಲಗಿರಿ ಲಕ್ಷ್ಮೀನಗರದ ವಿಶ್ವನಾಥ ಹಾಗೂ ಸುಕೇಶ್‌ ಅವರು, ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಮಲ್ಪೆ ಶಾಖೆಯ ವ್ಯವಸ್ಥಾಪಕ ಸುಬ್ಬಣ್ಣ ಕೊರೋನಾ ಕಾಲದಲ್ಲಿ ಅಂದರೆ 2021ರ ಜೂನ್ ತಿಂಗಳಲ್ಲಿ ಮನೆಗೆ ಬಂದು, ಆಧಾರ್ ಹಾಗೂ ಪಾನ್ ಕಾರ್ಡ್ ಪಡೆದು, ಯಾವುದೇ ದಾಖಲೆಗಳಿಗೆ ಸಹಿ ಪಡೆಯದೆ 20,000ರೂ. ಸಾಲ ನೀಡಿದ್ದು, ತಿಂಗಳಿಗೆ 900ರೂ. ಬ್ಯಾಂಕಿಗೆ ಪಾವತಿಸುವಂತೆ ತಿಳಿಸಿದ್ದರು. ಇದೇ ಸಮಯದಲ್ಲಿ ಇವರು ದೀಪಕ್, ಮಿಥುನ್, ವಾರಿಜಾ, ರೆಹನಾ, ನಸೀಮ ಹಾಗೂ ಇತರ ಹಲವು ಮಂದಿಗೆ ಇದೇ ರೀತಿ ಸಾಲಕೊಟ್ಟಿದ್ದರು. ನಂತರ ನಾವು ಸಾಲದ ಹಣವನ್ನು ತಿಂಗಳಿಗೆ ಸರಿಯಾಗಿ ಕಟ್ಟಿಕೊಂಡು ಬಂದಿದ್ದೆವು. ಈ ನಡುವೆ ಬ್ಯಾಂಕಿನಿಂದ ನೋಟಿಸು ಬಂದಿದ್ದು, ಮಲ್ಪೆ ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ನಮ್ಮ ಖಾತೆಯಿಂದ 2 ಲಕ್ಷ ರೂ. ಸಾಲ ಪಡೆದಿದ್ದು, ಕೂಡಲೆ ಪಾವತಿಸುವಂತೆ ಸಿಬ್ಬಂದಿ ತಿಳಿಸಿದ್ದರು. ಈ ಬಗ್ಗೆ ವ್ಯವಸ್ಥಾಪಕರು ಕೂಡ ಸರಿಯಾಗಿ ಉತ್ತರ ನೀಡಿಲ್ಲ. ಈ ಬಗ್ಗೆ ಅಧ್ಯಕ್ಷರಲ್ಲಿ ಈ ಮೋಸದ ಬಗ್ಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಹಾಗೂ ಈ ಮಧ್ಯೆ ಬ್ಯಾಂಕ್ ವ್ಯವಸ್ಥಾಪಕ ಸುಬ್ಬಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಬ್ಯಾಂಕ್‌ನವರು ಪದೇ ಪದೇ ನೋಟೀಸ್ ನೀಡಿ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿದ್ದರು. ನಮ್ಮಿಂದ ಆಧಾರ್ ಹಾಗೂ ಪಾನ್ ಕಾರ್ಡ್ ಪಡೆದು ಕ್ರಿಮಿನಲ್ ಸಂಚು ರೂಪಿಸಿ ನಮ್ಮ ನಕಲಿ ಸಹಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ನಮ್ಮ ಹೆಸರಿನಲ್ಲಿ ಸಾಲ ಪಡೆದು ಅದನ್ನು ಸ್ವಂತ ಬಳಕೆಗೆ ಉಪಯೋಗಿಸಿ ಮೋಸ ಮಾಡಿದ್ದಾರೆ. ನಾವು ಪಡೆದ 20 ಸಾವಿರ ರೂ. ಸಾಲದ ಹಣವನ್ನು ಬ್ಯಾಂಕಿಗೆ ವಾಪಾಸ್ಸು ನೀಡಲು ನಾವು ಸಿದ್ಧರಿದ್ದೇವೆ. ಈ ಪ್ರಕರಣ ದಿಂದ ನಮ್ಮ ಮಕ್ಕಳ ಶಿಕ್ಷಣ ಸಾಲ ಹಾಗೂ ಬ್ಯಾಂಕ್ ವ್ಯವಹಾರಗಳಲ್ಲಿ ನಮಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ದೂರಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಅವರು, ಈ ರೀತಿ ಸಾಲದ ಹೆಸರಿನಲ್ಲಿ 1413 ಮಂದಿಗೆ 28 ಕೋಟಿ ರೂ. ಹಣವನ್ನು ಮೋಸ ಮಾಡಲಾಗಿದೆ. ಈ ಮೋಸದ ಜಾಲದಲ್ಲಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರಗಿಸಬೇಕು. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ವ್ಯವಸ್ಥಾಪಕರ ಆತ್ಮಹತ್ಯೆಗೆ ಕಾರಣರಾದವರನ್ನು ಉನ್ನತ ಮಟ್ಟದ ತನಿಖೆ ನಡೆಸಿ ಮೋಸ ಹೋದವರಿಗೆ ಹಾಗೂ ಮೃತ ವ್ಯವಸ್ಥಾಪಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು  ಆಗ್ರಹಿಸಿದ್ದಾರೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ವತಿಷ್ಠಾಧಿಕಾರಿ ಡಾ. ಕೆ ಅರುಣ್ ಅವರು, ಬ್ಯಾಂಕಿನಿಂದ ಮೋಸ ಆಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೆಲವರು ದೂರು ನೀಡಿದ್ದಾರೆ. ಈ ಕುರಿತು ಈಗಾಗಲೇ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಈ ಎಲ್ಲ ದೂರನ್ನು ಮಲ್ಪೆಯಲ್ಲಿ ಆಗಿರುವ ಎಫ್‌ಐಆರ್‌ಗೆ ಸೇರಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!