ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ – ವಿ. ಪ ಉಪ ಚುನಾವಣೆ ಸಿದ್ಧತಾ ಸಭೆ
ಕಾಪು ಅ.09(ಉಡುಪಿ ಟೈಮ್ಸ್ ವರದಿ): ಇದೇ ತಿಂಗಳ 21ನೇ ತಾರೀಕಿಗೆ ನಡೆಯಲಿರುವ, ಉಡುಪಿ -ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ವಿಧಾನ ಪರಿಷತ್ ಚುನಾಣೆಯ ಸಿದ್ಧತಾ ಸಭೆಯು ‘ಕಾಪುವಿನ ರಾಜೀವ್ ಭವನ’ ದಲ್ಲಿ ನಡೆಯಿತು.
ಸಭೆಯಲ್ಲಿ ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಮಾತನಾಡಿ, ಉಪ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್, ಪಕ್ಷದ ಅಭ್ಯರ್ಥಿಯಾಗಿ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಆಗಾಧ ಅನುಭವ ಮತ್ತು ಜ್ಞಾನವುಳ್ಳ ಬೈಂದೂರು ರಾಜು ಪೂಜಾರಿಯವರಂತಹ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿರುವುದು ಅವರ ಪಕ್ಷನಿಷ್ಠೆ ಮತ್ತು ಪಕ್ಷಕ್ಕಾಗಿ ಅವರು ಸಲ್ಲಿಸಿರುವ ಸುದೀರ್ಘ ಸೇವೆಗೆ ಸಂದ ಫಲವಾಗಿದೆ ಎಂದರು.
ಇವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಯು ಇಂದಿಗೂ ಒಂದು ಗ್ರಾಮ ಪಂಚಾಯತ್ ಸದಸ್ಯನಾಗಿಯೂ ಅನುಭವವಿಲ್ಲದ ಅಭ್ಯರ್ಥಿಯಾಗಿದ್ದು, ಇಂತಹವರು ವಿಧಾನ ಪರಿಷತ್ ನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ವ್ಯವಸ್ಥೆಗಳ ಬಗ್ಗೆಯಾಗಲಿ ಅಥವಾ ಜನಪ್ರತಿನಿದಿನಗಳ ಪರವಾಗಿಯಾಗಲಿ ಯಾವ ರೀತಿಯಲ್ಲಿ ಧ್ವನಿಯಾಗಬಲ್ಲರು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಪಕ್ಷತೀತವಾಗಿ ಎಲ್ಲಾ ಪಕ್ಷದ ಬೆಂಬಲಿತ ಸದಸ್ಯರು ಆತ್ಮವಿಮರ್ಶೆಯನ್ನು ಮಾಡಿಕೊಂಡು ಮತ ಚಲಾಯಿಸಿದರೆ, ರಾಜು ಪೂಜಾರಿವರ ಗೆಲುವು ನಿಶ್ಚಿತ, ಹಾಗೂ ವಿಧಾನ ಪರಿಷತ್ ಸದಸ್ಯತನದ ಘನತೆಯೂ ಹೆಚ್ಚಲಿದೆ ಎಂದರು.
ಈ ಸಂದರ್ಭದಲ್ಲಿ ಕೆ. ಪಿ. ಸಿ. ಸಿ ಕಾರ್ಯಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ, ಅಭ್ಯರ್ಥಿ ರಾಜು ಪೂಜಾರಿ, ಉಡುಪಿ ಜಿಲ್ಲಾ ಚುನಾವಣಾ ಉಸ್ತುವಾರಿ ಎಮ್. ಎಸ್. ಮಹಮ್ಮದ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಪಕ್ಷದ ಪ್ರಮುಖರಾದ ನವೀನ್ ಚಂದ್ರ ಜೆ. ಶೆಟ್ಟಿ, ಕಾಪು ದಿವಾಕರ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಹಾಬಲ ಕುಂದರ್, ಗೀತಾ ವಾಗ್ಲೇ, ಶರ್ಫುದ್ದಿನ್ ಶೇಖ್, ವಿಶ್ವಾಸ್ ಅಮೀನ್, ಅಬ್ದುಲ್ ಅಜೀಜ್, ವಿಕ್ರಂ ಕಾಪು ಮತ್ತಿತರ ಪ್ರಮುಖರು ಹಾಗೂ ಗ್ರಾಮ ಪಂಚಾಯತ್, ಪುರಸಭೆ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು ದಕ್ಷಿಣ ಬ್ಲಾಕ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು, ಕಾಪು ಉತ್ತರ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಲಾಲ್ ಧನ್ಯವಾದ ಸಲ್ಲಿಸಿದರು.