ಭಾರೀ ಮಳೆ- ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿತ-ಪ್ರವಾಹ ಭೀತಿ

ಬೆಳ್ತಂಗಡಿ ಅ.09 : ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಸಣ್ಣ ಜಲಪಾತಗಳಲ್ಲಿ ಪ್ರವಾಹದಂತೆ ನೀರು ಬಂದಿದ್ದು, ಘಾಟಿಯ ಮೂರನೇ ತಿರುವಿನ ಸಮೀಪ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. 

ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ವಾಹನಗಳ ಸಂಚಾರಕ್ಕೂ  ಅಡಚಣೆ ಯುಂಟಾಗಿತ್ತು‌. ರಸ್ತೆಗೆ ಬಿದ್ದ ಮರಗಳನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಚಾರ್ಮಾಡಿ ಘಾಟಿಯ ಮೇಲ್ಭಾಗದಿಂದ ಹರಿದು ಬಂದ ನೀರು ನೇರವಾಗಿ ನೆರಿಯ ಹಳ್ಳವನ್ನು ಸೇರುತ್ತಿದ್ದು ಘಾಟಿಯ ಮೇಲ್ಭಾಗದಲ್ಲಿ ಸುರಿದ ಮಳೆ ಹಾಗೂ ಭೂ ಕುಸಿತದಿಂದಾಗಿ ನೆರಿಯದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿಯ ನೆರಿಯ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಸಂಜೆಯ ವೇಳೆ ಮತ್ತೆ ಮುಳುಗಡೆಯಾಗಿದೆ.‌ ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತ ಗೊಂಡಿವೆ. ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ನದಿಯಲ್ಲಿ ಹರಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!