ಉಡುಪಿ: ಗ್ರಾಪಂ ಪಿಡಿಒ, ನೌಕರರಿಂದ ಮುಷ್ಕರ- ಜಿಲ್ಲೆಯ ಎಲ್ಲಾ 155 ಗ್ರಾಪಂಗಳಲ್ಲಿ ಸೇವೆ ಸ್ಥಗಿತ
ಉಡುಪಿ ಅ.07 (ಉಡುಪಿ ಟೈಮ್ಸ್ ವರದಿ): ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅ.04 ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಗ್ರಾಮ ಪಂಚಾಯಿತಿಗಳ ಸೇವೆಯನ್ನು ಸ್ಥಗಿತಗೊಳಿಸಿ ನಡೆಸುತ್ತಿರುವ ಮುಷ್ಕರ ಜಿಲ್ಲಾ ಕೇಂದ್ರಗಳಿಗೆ ಸ್ಥಳಾಂತರಗೊಂಡಿದೆ.
ಇಂದಿನಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರಾಪಂ ಪಿಡಿಒ ಹಾಗೂ ಪಂಚಾಯತ್ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಉಡುಪಿ ಜಿಲ್ಲೆಯ ಎಲ್ಲ 155 ಗ್ರಾಮ ಪಂಚಾಯಿತಿಯ ನೌಕರರು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ.
ಈ ವೇಳೆ ಸಂಘದ ಕಾರ್ಯದರ್ಶಿ ರಮೇಶ್ ನಾಯಕ್ ಅವರು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಯನ್ನು ನೀಡದೆ ಯಥಾ ಸ್ಥಿತಿಯನ್ನು ಮುಂದುವರಿಸಲಾಗಿದೆ. ಈ ಹೋರಾಟವು ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೆ ಅಥವಾ ರಾಜ್ಯ ಸಂಘದಿಂದ ಸೂಕ್ತ ನಿರ್ದೇಶನ ಬರುವವರೆಗೆ ಅನಿರ್ದಿಷ್ಟ ಅವಧಿಗೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಾಧ್ಯಕ್ಷ ಮಂಜುನಾಥ್ ಪಿ. ಶೆಟ್ಟಿ, ಪಂಚಾಯತ್‌ರಾಜ್ ಇಲಾಖೆ ವೃಂದ ಸಂಘ ಪದಾಧಿಕಾರಿಗಳಾದ ಅನಿಲ್ ಶೆಟ್ಟಿ, ಸಂತೋಷ್ ಜೋಗಿ, ಚಂದ್ರ ಬಿಲ್ಲವ, ತಿಲಕ್‌ರಾಜ್, ಗುರುಮೂರ್ತಿ, ರವೀಂದ್ರ ರಾವ್, ಆಶಾಲತಾ, ವಸಂತಿ, ರಮೇಶ್ ಕೆ. ನಾಯಕ್, ರುಕ್ಕನ ಗೌಡ, ಶಿವರಾಜು, ನಾಗೇಶ್ ಬಿ., ದಯಾನಂದ ಬೆನ್ನೂರು, ಪ್ರವೀಣ್ ಡಿ’ಸೋಜಾ, ಹರೀಶ್ಚಂದ್ರ ಆಚಾರ್ಯ, ಪ್ರಶಾಂತ್, ನಾರಾಯಣ ಬೀಜಾಡಿ, ಮಹೇಶ್ ಕೆ. ಸತೀಶ್ ಉಪಸ್ಥಿತರಿದ್ದರು.