ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆ

ಉಡುಪಿ ಅ.05 (ಉಡುಪಿ ಟೈಮ್ಸ್ ವರದಿ): ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಯುರೋಪ್ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು. 

ಮುಖ್ಯ ಅತಿಥಿಗಳು ದೀಪ ಹಚ್ಚಿ ಸಾಂಕೇತಿಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆ ಮಾಡಿದರು.

ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತೀಯ ರಾಯಭಾರ ಕಚೇರಿಯಲ್ಲಿ ಸಾಂಸ್ಕೃತಿಕ ಅಧಿಕಾರಿ ರಾಜೀವ್ ಚಿತ್ಕಾರ ಅವರು, ಯಕ್ಷಗಾನ ಈ ಮೊದಲು ನೋಡಿರಲಿಲ್ಲ ಇದು ನಮ್ಮ ಭಾರತದ ಅದ್ಭುತ ಕಲೆ ಎಂಬುದು ನಮಗೆ ಹೆಮ್ಮೆ, ಇಂತಹ ಪ್ರಾಚೀನ ಕಲೆಯನ್ನ ಪಾರಂಪರಿಕವಾಗಿ ಪ್ರಪಂಚಕ್ಕೆ  ಪರಿಚಯಿಸುವಲ್ಲಿ ಯಕ್ಷಧ್ರುವ ಸಂಸ್ಥೆಯು ಯಶಸ್ವೀ ಆಗಲೆಂದು ಆಶಿಸಿದರು. 

ಮ್ಯೂನಿಕ್ ನಗರದ ಎಲ್ಎಂಯೂ ವಿಶ್ವವಿದ್ಯಾ ಲಯ ಇಂಡಾಲಜಿ ವಿಭಾಗದ ಪ್ರಸಿದ್ಧ ನಿವೃತ್ತ ಪ್ರಾಧ್ಯಾಪಕ ಡಾ. ರಾಬರ್ಟ್ ಜೈಡನ್ಬೊಸ್ ಅವರು ಮಾತನಾಡಿ ಇಪ್ಪತ್ತು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿನ ಒಂದು ಸಣ್ಣಹಳ್ಳಿಯಲ್ಲಿ ಯಕ್ಷಗಾನ ಬಯಲಾಟ ನೋಡಿದ ನೆನಪು ಮಾಡಿಕೊಂಡು ತಾಯ್ನಾಡಿನಿಂದ ದೂರ ಬಂದಿರುವ ನೀವೆಲ್ಲ ಈ ಯಕ್ಷಗಾನವನ್ನು ಇಲ್ಲಿ ಸಹ ಪರಿಚಯ ಮಾಡುವ ಪ್ರಯತ್ನ ನನಗೆ ಬಹಳ ಸಂತಸ ತಂದಿದೆ. ನಿಮ್ಮ ಪ್ರಯತ್ನ ಸಫಲವಾಗಲಿ ಎಂದು ಆಶೀರ್ವದಿಸಿದರು. 

ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಅಧ್ಯಕ್ಷ ನರೇಂದ್ರ ಶೆಣೈ ರವರು ಮಾತನಾಡಿ ತಮ್ಮ ಹಲವು ವರ್ಷಗಳ ಮಹಾದಾಶಯ ಇಂದು ಕಾರ್ಯಗತ ಆಯ್ತು, ಬಹಳ ಸಂತಸದ ದಿನ, ಮುಂದಿನ ದಿನಗಳಲ್ಲಿ ಯಕ್ಷಗಾನ ಗುರು ಅಜಿತ್ ಪ್ರಭು ರವರ ಸಾರತ್ಯದಲ್ಲಿ  ಯುರೋಪ್ ಆದ್ಯಂತ ಯಕ್ಷಗಾನ ಪ್ರದರ್ಶನ ಹಾಗೂ ಮುಖ್ಯವಾಗಿ ನಮ್ಮ ಮುಂದಿನ ಪೀಳಿಗೆಗೆ ಈ ಕಲೆಯನ್ನು ಧಾರೆ ಎರೆಯುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಈ ಸುದಿನದಂದು ಸಂಸ್ಥೆಯ ಕಾರ್ಯದರ್ಶಿ ಹಾಗೂ ಜರ್ಮನಿಯ ಯಕ್ಷಗಾನ ಕಲಾವಿದರು ಮತ್ತು ಗುರು ಶ್ರೀ ಅಜೀತ್ ಪ್ರಭು ಕಳೆದ ಒಂದು ವರ್ಷದಿಂದ ಜರ್ಮನಿಯ ಮ್ಯೂನಿಕ್, ಪ್ರಾಂಕ್ಪರ್ಟ್, ನೂರೆನ್ಬರ್ಗ್, ಮತ್ತು ಬೆಲ್ಜಿಯಂ ನ ಬ್ರುಸ್ಸೇಲ್ಸ್ ನಗರಗಳಿಂದ  ಯಕ್ಷಗಾನ ಕಲಿಯುತ್ತಿದ್ದ ತಮ್ಮ ವಿದ್ಯಾರ್ಥಿಗಳೊಡನೆ  ಯಕ್ಷಗಾನ ಕಲೆಯನ್ನ ಸಂಪ್ರದಾಯಿಕವಾಗಿ ಪರಿಚಯಿಸುವ ಉದ್ದೇಶದಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಹೆಜ್ಜೆ ಕಲಿತು ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.

ತದನಂತರ ಯಕ್ಷಗಾನ ವಿದ್ಯಾರ್ಥಿಗಳಿಂದ  ಕೋಟ ಶಿವರಾಮ ಕಾರಂತರು ಪರಿಚಯಿಸಿದ ಯಕ್ಷಗಾನ ಬ್ಯಾಲೆ ರೂಪದಲ್ಲಿ ಪ್ರದರ್ಶನಗೊಂಡ ಚಿಕ್ಕ ಮಕ್ಕಳ”ಮಾಯಾಮೃಗ”  (ಸೀತಾಪಹರಣ) ಯಕ್ಷಗಾನ ರೂಪಕ ನಡೆಯಿತು.

ಈ ಸಂದರ್ಭದಲ್ಲಿ ಸನಾತನ ಅಕಾಡಮಿಯ ಅನೂಷಾ ಶಾಸ್ತ್ರಿ , ಸಿರಿಗನ್ನಡಕೂಟ ಮ್ಯೂನಿಕ್ ಅಧ್ಯಕ್ಷ ಶ್ರೀಧರ ಲಕ್ಷ್ಮಾಪುರ ಹಾಗೂ ಫ್ರಾಂಕ್ಫರ್ಟ್ ರೈನ್ ಮೈನ್ ಕನ್ನಡ ಸಂಘದ ಅಧ್ಯಕ್ಷ ವೇದಮೂರ್ತಿ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!