ಉಡುಪಿ ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ- ಪೌರಾಯುಕ್ತರಿಂದ ಕಾರ್ಯಾಚರಣೆ
ಉಡುಪಿ ಸೆ.30(ಉಡುಪಿ ಟೈಮ್ಸ್ ವರದಿ): ಉಡುಪಿಗೂ ನಿಷೇಧಿತ ಚೀನಾದ ಬೆಳ್ಳುಳ್ಳಿ ಲಗ್ಗೆ ಇಟ್ಟಿದ್ದು, ನಗರಸಭೆಯ ಪೌರಾಯುಕ್ತ ರಾಯಪ್ಪ ನೇತೃತ್ವದಲ್ಲಿ ಆದಿಉಡುಪಿ ಎಪಿಎಂಸಿಗೆ ದಾಳಿ ನಡೆಸಲಾಯಿತು.
ಮಾರುಕಟ್ಟೆಗಳಲ್ಲಿ ಕೆಲವು ವ್ಯಾಪಾರಸ್ಥರು ಚೀನ ಬೆಳ್ಳುಳ್ಳಿಯನ್ನು ದೇಶಿ ಬೆಳ್ಳುಳ್ಳಿ ಜತೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪೌರಾಯುಕ್ತರು ದಾಳಿ ನಡೆಸಿದ್ದರು. ಮಾರುಕಟ್ಟೆಯಲ್ಲಿ ಪರಿಶೀಲನೆ ನಡೆಸಿದ ಪೌರಾಯುಕ್ತರು ವರ್ತಕರಿಗೆ ನಿಷೇಧಿತ ಬೆಳ್ಳುಳ್ಳಿಯನ್ನು ಮಾರಾಟ ಮಾಡದಂತೆ ಸೂಚನೆ ನೀಡಿದರು.
ಈ ವೇಳೆ 238 ಚೀಲ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಬೆಳ್ಳುಳ್ಳಿಯ ಗುಣಮಟ್ಟದ ತನಿಖೆಗೆ ಪ್ರಯೋಗಾಲಯಕ್ಕೆ ರವಾನೆ ಮಾಡಲಾಯಿತು.
ಕಡಿಮೆ ಬೆಲೆಯಲ್ಲಿ ಸಿಗುವ ಈ ನಿಷೇಧಿತ ಬೆಳ್ಳುಳ್ಳಿಗಳಲ್ಲಿ ರಾಸಾಯನಿಕ ಬಳಸುವುದರಿಂದ ಕ್ಯಾನ್ಸರ್ ಕಾರಕವಾಗಿದ್ದು, ಕಿಡ್ನಿ, ಲಿವರ್‌ಗೆ ಹಾನಿಯುಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.