ಬೆಳ್ಳಿ ಪರದೆ ಕಥೆ-ವ್ಯಥೆ
ಬೆಂಗಳೂರು ಮೇ.25 : ಸಿನೆಮಾ ಅದೊಂತರಾ ಮಾಯಾ ಲೋಕ. ಕೆಲವೊಮ್ಮೆ ಹೊಟ್ಟೆ ಹುಣ್ಣಾಗಿಸುವಷ್ಟು ನಗು , ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸುವಷ್ಟು ಅದ್ಬುತವಾದ ಹಾಡುಗಳು, ಫೈಟಿಂಗ್ಸ್, ಹೃದಯ ಭಾರವೆನಿಸುವ ನೋವು . ಏನೋ ನಮ್ಮ ಕಥೆಯೇ ಪರದೆಯಲ್ಲಿ ಮೂಡಿಬರುತ್ತಿದೆ ಎನ್ನುವ ಭಾವನೆ ಹುಟ್ಟಿಸುವ ಕಥೆಗಳು ಇವೆಲ್ಲಾ ಸಿನೆಮಾದ ವಿಶೇಷತೆಗಳು. ಒಂದು ಸಿನೆಮಾ ಯಶಸ್ಸು ಕಾಣಬೇಕಾದರೆ ಪ್ರೇಕ್ಷಕರು ಅತ್ಯಂತ ಮುಖ್ಯ ಎನ್ನುತ್ತಾರೆ. ಖಂಡಿತಾ ಅದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ಪ್ರೇಕ್ಷಕನಿಗೆ ಆ ಸಿನೆಮಾ ಅಷ್ಟೋಂದು ಇಷ್ಟ ಆಗಬೇಕೆಂದರೆ ಅದಕ್ಕೆ ಕಾರಣ ಆ ಸಿನೆಮಾದ ಕಥೆ, ತಾರೆಯರ ಜೀವ ತುಂಬಿದ ನಟನೆ, ಸಂಗೀತ , ಸಂಕಲನ ಹೀಗೆ ಇನ್ನೂ ಅನೇಕ ವಿಚಾರಗಳು.
ಅರೇ.. ಕೋವಿಡ್ ಪರಿಣಾಮದಿಂದ ಈಗೆಲ್ಲಾ ಚಿತ್ರ ಮಂದಿರಗಳು ಮುಚ್ಚಿವೆ, ಇಂತಹ ಸಂದರ್ಭದಲ್ಲಿ ಚಿತ್ರರಂಗದ ಬಗ್ಗೆ ಏಕೆ ಅಂತ ನೀವು ಅನ್ಕೋಬೋದು. ಆದರೆ ಪ್ರಸ್ತುತ ಪರಿಸ್ಥಿತಿ ಯಲ್ಲಿ ಸಂಕಷ್ಟ ಕ್ಕೆ ಸಿಲುಕಿರುವವರಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ಕೂಡಾ ಇದ್ದಾರೆ. ಹೌದು ಈ ಮೊದಲೇ ಹೇಳಿದಂತೆ ಕೋವಿಡ್ 2 ನೇ ಅಲೆಯ ಅಟ್ಟಹಾಸಕ್ಕೆ ಚಿತ್ರಮಂದಿರಗಳು ಮುಚ್ಚಿವೆ, ಸಿನೆಮಾ ಚಟುವಟಿಕೆಗಳಿಗೆ ತಡೆ ಬಿದ್ದಿದ್ದು, ಚಿತ್ರರಂಗದ ಜೊತೆಗೆ ಕಲಾವಿದರು, ತಂತ್ರಜ್ಞರು , ಎಲ್ಲರ ಜಿವನದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಸಿನೆಮಾ ನೇ ಜೀವನ ಎಂದು ನಂಬಿದ್ದ ಅದೆಷ್ಟೋ ಕಲಾವಿದರು ಕೋವಿಡ್ ಪ್ರಭಾವಕ್ಕೆ ತತ್ತರಿಸಿ ಹೋಗಿದ್ದಾರೆ.
ಈ ನಡುವೆ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೋರಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
2020ರ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಚಿತ್ರೋದ್ಯಮದ 6,000 ಕುಟುಂಬಗಳಿಗೆ ತಲಾ 3000 ರೂ ಮೌಲ್ಯದ ದಿನಸಿ ಪಡಿತರ ರಿಲೆಯನ್ಸ್ ಕೂಪನ್ ಅನ್ನು ಸರ್ಕಾರದ ವತಿಯಿಂದ ನೀಡಲಾಗಿತ್ತು. ಅದರಂತೆಯೇ ಇಂದಿನ ಸಂಕಷ್ಟದ ಸಮಯದಲ್ಲೂ ಕನಿಷ್ಟ ತಲಾ 5,000 ರೂ ಮೌಲ್ಯದ ಆಹಾರ ಪಡಿತರ ಕೂಪನ್ ಹಾಗೂ ಇತರೆ ವಿಶೇಷ ನೆರವನ್ನು ನೀಡಬೇಕು. ಅಲ್ಲದೆ ಚಿತ್ರೋದ್ಯಮವನ್ನು ಆದ್ಯತೆ ಎಂದು ಪರಿಗಣಿಸಿ ಕೋವಿಡ್ ಲಸಿಕೆಯನ್ನು ಹಾಕಲು ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕು ಎಂಬುದು ಸುನೀಲ್ ಪುರಾಣಿಕ್ ಅವರ ಮನವಿಯಾಗಿದೆ.
ಚಿತ್ರ ರಂಗದ ಮನವಿಯನ್ನು ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೊದಲ ಹಂತದ ಪ್ಯಾಕೇಜ್ನಲ್ಲಿ ಕೆಲವರು ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದ್ದು ಮುಂದಿನ ಪ್ಯಾಕೇಜ್ ಘೋಷಣೆ ಸಂದರ್ಭದಲ್ಲಿ ಚಿತ್ರೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೊವಿಡ್ ಮೊದಲನೇ ಅಲೆ ನಂತರ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಮೊದಲನೇ ಅಲೆ ತಣ್ಣಗಾದ ನಂತರದಲ್ಲಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುವ ಮೂಲಕ ಚಿತ್ರರಂಗ ಮತ್ತೆ ಚೇತರಿಕೆ ಕಾಣಲು ಆರಂಭವಾಗಿತ್ತು. ಇನ್ನು, ಸಾಕಷ್ಟು ಸಿನಿಮಾಗಳು ಘೋಷಣೆ ಆಗಿ, ಶೂಟಿಂಗ್ ಕೂಡ ಶುರುವಾಗಿತ್ತು. ಹೀಗಾಗಿ, ಎಲ್ಲವೂ ಮತ್ತೆ ಮೊದಲಿನಂತಾಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಎಲ್ಲಾ ಸರಿಹೋಯಿತು ಎನ್ನುತ್ತಿರುವಾಗಲೇ ಏಕಾಏಕಿ ಮತ್ತೆ ಕೊವಿಡ್ ಎರಡನೇ ಅಲೆ ಬಂದಪ್ಪಳಿಸಿದೆ. ಇದರಿಂದ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ತಕ್ಷಣವೇ ಚಿತ್ರೋದ್ಯಮದ ನೆರವಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕನ್ನಡ ಚಿತ್ರರಂಗ ಸರಕಾರ ಕ್ಕೆ ಮನವಿ ಮಾಡಿಕೊಂಡಿದೆ.