ಉಡುಪಿ: ಮಹಿಳೆಯರು, ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿ- 2ನೇ ದಿನದ ಕಾರ್ಯಕ್ರಮ
ಉಡುಪಿ ಸೆ.24(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ,ಉಡುಪಿ ಜಿಲ್ಲೆ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ಮತ್ತು ನ್ಯಾಯಕೂಟ ಇದರ ಆಶ್ರಯದಲ್ಲಿ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿಯ 2ನೇ ದಿನದ ಕಾರ್ಯಕ್ರಮ ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕರು ಮತ್ತು ವಕೀಲರೂ ಆಗಿರುವ ಭಾನುಮತಿ ಎಂ. ಆರ್ ನಾಯರಿ ಅವರು ಮಾತನಾಡಿ, ಮಹಿಳಾ ಹಕ್ಕುಗಳು ಸಾಂವಿಧಾನಿಕ ಅವಕಾಶಗಳು ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ಮಹಿಳೆಯರ ಹಕ್ಕುಗಳ ವಿಷಯಗಳಲ್ಲಿ ಸರಿಯಾದ ಮಾಹಿತಿಯನ್ನು ನಾವು ಪಡೆದುಕೊಳ್ಳಬೇಕು. ಇದು ಹಿಂಸೆಗಳು, ಅತ್ಯಾಚಾರಗಳು ಅಥವಾ ಅಪರಾಧಗಳು ನಡೆದದಲ್ಲಿ ಇವುಗಳನ್ನು ದೂರು ದಾಖಲಿಸಲು ನಮಗೆ ಕಾನೂನುಗಳು ನೆರವಾಗುತ್ತದೆ ಎಂದರು. ಪ್ರಚಲಿತದಲ್ಲಿರುವ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಅದಕ್ಕೆ ಸರಿಯಾದ ರೀತಿಯ ತಿಳುವಳಿಕೆಯನ್ನು ಪಡೆದುಕೊಂಡರೆ ನಮಗೂ ಕೂಡ ಅಂತಹ ಸಮಸ್ಯೆಗಳು ಆದಲ್ಲಿ ಬಗೆಹರಿಸಿಕೊಳ್ಳಬಹುದು ಎಂಬಂತಹ ಮಾಹಿತಿಯನ್ನು ನೀಡಿದರು.ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗದೆ ಅಗತ್ಯವಾಗಿದ್ದಲ್ಲಿ ಮಾತ್ರ ಬಳಸುವಂತಹ ಪರಿಪಾಠವನ್ನು ಹೊಂದಿರಬೇಕು ಇಲ್ಲದೆ ಹೋದಲ್ಲಿ ಸೈಬರ್ ಕ್ರೈಂ ನಂತಹ ಸಮಸ್ಯೆಗಳು ಆದಲ್ಲಿ ನಮ್ಮಿಂದ ತಪ್ಪುಗಳು ನಡೆದು ಹೋದಲ್ಲಿ ಪಶ್ಚಾತಾಪ ಪಟ್ಟುಕೊಂಡರು ಪ್ರಯೋಜನವಾಗುವುದಿಲ್ಲ ಏಕೆಂದರೆ ಜೀವನ ಶೈಲಿ,ಸಾಮಾಜಿಕ ವ್ಯವಸ್ಥೆಯು ದಿನದಿಂದ ದಿನಕ್ಕೆ ಬದಲಾಗುತ್ತ ಹೋಗುವುದರಿಂದ ನಾವೂ ಕೂಡ ಕಾನೂನುಗಳ ಬಗ್ಗೆ ಜ್ಞಾನವನ್ನು ಪಡೆದಿರಬೇಕು ಎಂದು ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕರು ಮತ್ತು ವಕೀಲರೂ ಆಗಿರುವ ಶ್ರೀನಿವಾಸ ಉಪಾಧ್ಯ ಅವರು ಮಾತನಾಡಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಈ ವಿಷಯದ ಕುರಿತಾಗಿ ಮಾಹಿತಿಯನ್ನು ನೀಡಿದರು. ಹಾಗೂ ಕೌಟುಂಬಿಕ ವಿಷಯದಲ್ಲಿ ಗಂಡ ಹೆಂಡತಿಗೆ ಅಥವಾ ಅಣ್ಣ ತಂಗಿಗೆ ಹಾಗೂ ಕುಟುಂಬದ ಇತರ ಸದಸ್ಯರುಗಳು ಹಲ್ಲೆ ಮಾಡಿದಂತಹ ಉದಾಹರಣೆಗಳನ್ನು ಕಾಣಬಹುದು, ಇಂತಹ ಅಪರಾಧಗಳು ಅಪರಾಧಗಳು ನಡೆದಲ್ಲಿ ಅಂಗನವಾಡಿ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೇಂದ್ರಗಳಲ್ಲಿ, ಆಶಾ ಕಾರ್ಯಕರ್ತರಲ್ಲಿ ದೂರುಗಳನ್ನು ನೀಡಬಹುದು ಜೊತೆಗೆ ಅದಕ್ಕೆ ಸರಿಯಾದ ಕ್ರಮ ಕೈಗೊಳ್ಳುವುದರ ಮೂಲಕ ಅಪರಾಧಿಗೆ ಶಿಕ್ಷೆಯನ್ನು ನೀಡಬಹುದು ಎಂದು ತಿಳಿಸಿದರು. ಯುವ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಆಗಬೇಕು ಎಂದರು.
ನಂತರದಲ್ಲಿ ಸಮುದಾಯ ಕಾರ್ಯಕರ್ತರ ದೀಪಿಕಾ ಮಣಿಪಾಲ ಇವರು ಹಿಂದೂ ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು. ಹಿಂದೂ ವಿವಾಹ ಕಾಯ್ದೆ ಎಂದರೇನು.? ಇದು ಯಾವಾಗ ಜಾರಿಗೆ ಬಂತು ಹಾಗೂ ಯಾವೆಲ್ಲ ಕಾನೂನುಗಳನ್ನು ಒಳಗೊಂಡಿದೆ ಎಂಬುದಾಗಿ ವಿವರಣೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಶೀಲ ನಾಡ, ಸಂಯೋಜಕ ಪುತ್ರನ್ ಹೆಬ್ರಿ , ದಿವಾಕರ್ ಕಳ್ತೂರು, ವಿಮಲ ಕಳ್ತೂರು, ಅಭಿಜಿತ್, ಸುಜಾತ ಕಾಸರಗೋಡು, ರಂಜಿತ್, ಹಾಗೂ ಹೆಬ್ರಿ, ಕಾಪು, ಕಿನ್ನಿಗೋಳಿ, ಕಳತ್ತೂರು ಸಂಘದ ಸದಸ್ಯರು ಉಪಸ್ಥಿತರಿದ್ದರು.