ಸಹಕಾರಿ ಸಂಸ್ಥೆಗಳು ಗ್ರಾಹಕರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸುತ್ತದೆ- ಡಾ.ಎಂ.ಎನ್. ರಾಜೇಂದ್ರ ಕುಮಾರ್
ಕುಂದಾಪುರ ಸೆ.22(ಉಡುಪಿ ಟೈಮ್ಸ್ ವರದಿ): ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕುಂದಾಪುರ ಇದರ 1000 ಕೋಟಿ ವಹಿವಾಟು ನಡೆಸಿರುವ ಪ್ರಯುಕ್ತ ಸಂಭ್ರಮಾಚರಣೆಯ ಸಮಾರಂಭ ಕುಂದಾಪುರದ ಕೋಟೇಶ್ವರದಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್.ಡಿ.ಸಿ.ಸಿ ಬ್ಯಾಂಕ್ ನಿ, ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ದೇಶದಲ್ಲೇ ಅತೀ ಹೆಚ್ಚು ವಾಣಿಜ್ಯ ಬ್ಯಾಂಕುಗಳು ಹುಟ್ಟಿದ್ದು ಅವಿಭಜಿತ ದ.ಕ ಜಿಲ್ಲೆಯಲ್ಲಾಗಿತ್ತು. ಆದರೀಗ ಒಂದೊಂದೇ ಬ್ಯಾಂಕುಗಳು ಸಂಕುಚಿತಗೊಳ್ಳುತ್ತಿದೆ. ಅನೇಕ ಬ್ಯಾಂಕುಗಳು ವಿಲೀನಗೊಂಡು ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಸಹಕಾರಿ ಸಂಸ್ಥೆಗಳು ಗ್ರಾಹಕರಿಂದ ಹಣ ಪಡೆದು ಅವರಿಗೇ ನೀಡಿ ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸುತ್ತದೆ. ಜೊತೆಗೆ ಸಹಕಾರಿ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಈ ಬಾರಿ 115 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿವರಿಸಲಾಯಿತು. ಹಾಗೂ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಕಡು ಬಡವರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯ ಭಾಗವಾಗಿ ಒಬ್ಬರಿಗೆ ಸಾಂಕೇತಿಕವಾಗಿ ಮನೆ ಹಸ್ತಾಂತರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಸರಿ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿ ಲಿ ಕುಂದಾಪುರದ ಅಧ್ಯಕ್ಷರಾದ ಜೋನ್ಸನ್ ಡಿ ಅಲ್ಮೇಡಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರುಗಳಾದ ಅ.ವಂ.ಮೊನ್ಸಿಇಳೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ.ಪಾವ್ಲ್ ರೇಗೊ, ದಾಯ್ಜಿವಲ್ಡ್ ಮಿಡಿಯಾ ಇದರ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್, ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ ಕುಂದಾಪುರ ಇದರ ಉಪಾಧ್ಯಕ್ಷರಾದ ಕಿರಣ್ ಮೆಲ್ವಿನ್ ಲೋಬೊ ಉಪಸ್ಥಿತರಿದ್ದರು.