ಹೊಸ ಕ್ರಿಮಿನಲ್ ಕಾನೂನು-ಪೊಲೀಸ್ ರಾಜ್ಯ ನಿರ್ಮಿಸುವ ಹುನ್ನಾರ-ಚಿಂತಕ ಶಿವ ಸುಂದರ್ ಆರೋಪ

ಉಡುಪಿ ಸೆ.21(ಉಡುಪಿ ಟೈಮ್ಸ್ ವರದಿ): ನೂತನ ಮೂರು ಅಪರಾಧಿಕ ಕಾನೂನುಗಳು ಬಲಾಢ್ಯರಿಗೆ ಲೋಪಗಳ ಮೂಲಕ ಬಿಡುಗಡೆಗೆ ದಾರಿ ಹಾಗೂ ಬಡವರಿಗೆ ಸಂಕೋಲೆಗಳ ಮೂಲಕ ಜೈಲು ಪಾಲು ಮಾಡುವ ಯತ್ನ ನಡೆದಿದೆ ಎಂದು ಸಾಮಾಜಿಕ ಚಿಂತಕ ಹಾಗೂ ಅಂಕಣಕಾರ ಶಿವಸುಂದರ್ ಆರೋಪಿಸಿದ್ದಾರೆ.

ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಕರ್ನಾಟಕ ಚಾಪ್ಟರ್ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ಡಾನ್ ಬಾಸ್ಕೊ ಹಾಲ್‌ನಲ್ಲಿ ನಡೆದ ನೂತನವಾಗಿ ಜಾರಿಗೆ ಬಂದಿರುವ ಮೂರು ಅಪರಾಧಿಕ ಕಾನೂನುಗಳ ಕುರಿತ ವಿಚಾರ ಸಂಕಿರಣದಲ್ಲಿ ‘ಫ್ಯಾಶಿಸ್ಟ್ ಕಾಲಘಟ್ಟದಲ್ಲಿ ಉದಾರವಾದಿ ಸಂವಿಧಾನ ಮತ್ತು ಕಾನೂನುಗಳ ಬಿಕ್ಕಟ್ಟುಗಳು’ ಕುರಿತು ಮಾತನಾಡಿದ ಅವರು, ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಪೊಲೀಸ್ ರಾಜ್ಯ ನಿರ್ಮಿಸುವ ಹುನ್ನಾರ ನಡೆಸಲಾಗುತ್ತಿದೆ ಬಿಜೆಪಿ ಸಂಘಪರಿವಾರ ಈ ದೇಶದ ಎಲ್ಲ ನಾಗರಿಕರು ಸಮಾನರು ಎಂಬುದಾಗಿ ಒಪ್ಪುವುದಿಲ್ಲ. ಅದಕ್ಕೆ ಅವರು ತನ್ನ ಕಲ್ಪನೆಯ ರಾಷ್ಟ್ರ ನಿರ್ಮಿಸಲು ಜನರ ಹಕ್ಕುಗಳನ್ನು ಪರೋಕ್ಷವಾಗಿ ಹಂತಹಂತವಾಗಿ ಕಿತ್ತು ಕೊಳ್ಳುವ ಕಾರ್ಯ ವಿವಿಧ ಕಾನೂನುಗಳ ಮೂಲಕ ಮಾಡುತ್ತಿದೆ. ಈ ಕಾನೂನುಗಳು ಜಾರಿ ಮಾಡುವುದರಿಂದ ಒಕ್ಕೂಟ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹೊಸ ಕಾನೂನುಗಳಿಂದ ಬಲಹೀನರಿಗೆ ಅಧಿಕಾರ ನಿರಾಕರಿಸುವ ಯತ್ನ ನಡೆಸಲಾತ್ತಿದೆ. ಅಲ್ಲದೆ ದುರ್ಬಲರಿಗೆ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸುವ ಹಕ್ಕುಗಳೇ ಇಲ್ಲದಂತಾಗುತ್ತದೆ. ಇದನ್ನು ಸೋಲಿಸಲು ಬಲವಾದ ಜನಪರ ಚಳವಳಿ ಕಟ್ಟುವ ಅಗತ್ಯ ನಮ್ಮ ಮುಂದೆ ಇದೆ ಎಂದರು.

‘ನೂತನ ಮೂರು ಅಪರಾಧಿಕ ಕಾನೂನು- ಒಂದು ವಿಶ್ಲೇಷಣೆ’ ಕುರಿತು ಹೈಕೋರ್ಟ್ ವಕೀಲ ವಿನಯ್ ಶ್ರೀನಿವಾಸ ಅವರು ಮಾತನಾಡಿ, ಹೊಸ ಅಪರಾಧಿಕ ಕಾನೂನುಗಳ ಕೆಲವು ಅಂಶಗಳಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ. ಕ್ರಿಮಿನಲ್ ಕಾನೂನು ಗಳಲ್ಲಿ ಸ್ಪಷ್ಟತೆ ಎಂಬುದು ಅತೀ ಅಗತ್ಯ. ಇಲ್ಲದಿದ್ದರೆ ವ್ಯಕ್ತಿ ತನ್ನ ಜೀವಿಸುವ ಹಕ್ಕನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗ ಬಹುದು ಎಂದರು.

ಉಪವಾಸ ಸತ್ಯಾಗ್ರಹವನ್ನು ಕೂಡ ಶಿಕ್ಷಾರ್ಹ ಅಪರಾಧ ಎಂಬಂತೆ ಈ ಕಾನೂನಿನ ಮೂಲಕ ಬಿಂಬಿಸಲಾಗಿದೆ. ಇದು ಪ್ರತಿರೋಧದ ಹಕ್ಕನ್ನು ಕಿತ್ತುಕೊಳ್ಳುವ ಹಾಗೂ ಹತ್ತಿಕ್ಕುವ ಅಂಶವಾಗಿದೆ. ರಾಜದ್ರೋಹ ಕಾನೂನನ್ನು ಕೈಬಿಟ್ಟು ಅದಕ್ಕಿಂತ ಅಪಾಯಕಾರಿಯಾದ ಕಾನೂನನ್ನು ಜಾರಿಗೆ ತರಲಾಗಿದೆ. ಇದು ಒಕ್ಕೂಟ ವ್ಯವಸ್ಥೆಗೆ ದೊಡ್ಡ ಧಕ್ಕೆ ಉಂಟು ಮಾಡಲಿದೆ ಎಂದು ಅವರು ತಿಳಿಸಿದರು.

ಕೆಲವೊಂದು ವಿಚಾರದಲ್ಲಿ ಕಾನೂನು ಆಯೋಗ ಸಲಹೆಗಳನ್ನು ನೀಡಿದೆ. ಆದರೆ ಸರಕಾರ ಇದನ್ನು ಪರಿಗಣಿಸಲಿಲ್ಲ. ಸರಕಾರಕ್ಕೆ ಈ ಕಾನೂನುಗಳ ಮೂಲಕ ಜನರಿಗೆ ಸ್ವಾತಂತ್ರ್ಯ ಹಾಗೂ ನ್ಯಾಯ ಕೊಡುವ ಉದ್ದೇಶ ಇಲ್ಲ ಎಂಬುದು ಕಂಡುಬರುತ್ತದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ರಾಜ್ಯ ಸರಕಾರಕ್ಕೆ ಬದಲಾವಣೆ ಮಾಡಲು ಅವಕಾಶ ಇದೆ. ಅದನ್ನು ಬದಲಾಯಿಸುವುದಾಗಿ ರಾಜ್ಯ ಸರಕಾರ ಈಗಾಗಲೇ ತಿಳಿಸಿದೆ. ಆ ಬಗ್ಗೆ ನಾವೆಲ್ಲ ಒತ್ತಡ ತರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಪಿಸಿಆರ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶ್ಯಾಮರಾಜ್ ಬಿರ್ತಿ ಅವರು ವಹಿಸಿದ್ದರು. 

ಈ ಸಂದರ್ಭದಲ್ಲಿ ಎಪಿಸಿಆರ್ ಅಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಸಲಾವುದ್ದೀನ್ ಅಬ್ದುಲ್ಲಾ, ಶಾರೂಕು ತೀರ್ಥಹಳ್ಳಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!