ಸೆ.22ರಂದು ಉಡುಪಿ ಜಿಲ್ಲಾಮಟ್ಟದ ಅಸಂಘಟಿತ ಗ್ಯಾರೇಜು ಕಾರ್ಮಿಕರ ನೋಂದಣಿ ಅಭಿಯಾನ
ಉಡುಪಿ ಸೆ.19(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ, ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜು ಹಾಗೂ ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರ ಇದರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲಾ ಮಟ್ಟದ ಅಸಂಘಟಿತ ಗ್ಯಾರೇಜು ಕಾರ್ಮಿಕರ ನೋಂದಣಿ ಅಭಿಯಾನ ಮತ್ತು ಶಿಬಿರವನ್ನು ಇದೇ ಸೆ.22ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಅವರು, ಇತ್ತೀಚೆಗೆ ರಾಜ್ಯ ಸರ್ಕಾರವು ಸಾರಿಗೆ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪನೆ ಮಾಡಿದ್ದು, ಅದರ ಸದಸ್ಯರಾಗಲು ಜಿಲ್ಲೆಯ ಎಲ್ಲಾ ಗ್ಯಾರೇಜ್ ಕಾರ್ಮಿಕರನ್ನು ಗುರುತಿಸುವ ನಿಟ್ಟಿನಲ್ಲಿ ಈ ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಅಂದಾಜು ಸುಮಾರು 3,000 ಗ್ಯಾರೇಜು ಮಾಲಕರು ಹಾಗೂ ಕಾರ್ಮಿಕರು ಪ್ರಸ್ತುತ ಕೆಲಸ ಮಾಡುತ್ತಿದ್ದು, ಸರಕಾರಿ ದಾಖಲೆಗಳು ಅಥವಾ ಇತರ ಯಾವ ದಾಖಲೆಗಳಲ್ಲಿಯೂ ಅವರ ನೋಂದಣಿ ಆಗಿಲ್ಲ. ಒಂದು ಜಿಲ್ಲಾ ಮಟ್ಟದ ಸಂಸ್ಥೆಯಾಗಿ ಜಿಲ್ಲಾ ಗ್ಯಾರೇಜು ಮಾಲಕರ ಸಂಘವು ಎಲ್ಲಾ ಗ್ಯಾರೇಜು ಕಾರ್ಮಿಕರ ನೋಂದಣಿ ಮಾಡಿ ಕಾರ್ಮಿಕ ಇಲಾಖೆಗೆ ಅವರ ಸಂಪೂರ್ಣ ಮಾಹಿತಿಗಳನ್ನು ದಾಖಲೆ ಸಮೇತ ನೀಡುವ ಹಾಗೂ ಈ ಮೂಲಕ ಸರಕಾರದಿಂದ ದೊರಕುವ ಸೌಲಭ್ಯತೆಗಳನ್ನು ಅವರಿಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.
ಹಾಗೂ ನೋಂದಣಿಗೆ ಬರುವ ಗ್ಯಾರೇಜ್ ಕಾರ್ಮಿಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಇತ್ತೀಚಿನ ಮೂರು ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.
ಸೆ.29ರಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಉಚಿತ ಹೃದಯ ಮತ್ತು ಆರೋಗ್ಯ ತಪಾಸಣೆ, ಅಂಚೆ ಅಪಘಾತ ವಿಮಾ ಯೋಜನೆಯ ನೋಂದಣಿ ಹಾಗೂ ಆಧಾರ್ ಕಾರ್ಡ್ ತಿದ್ದುಪಡಿ ಕೂಡ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು, ಕೋಶಾಧಿಕಾರಿ ಸಂತೋಷ್ ಕುಮಾರ್, ಗೌರವ ಸಲಹೆಗಾರ ಉದಯ ಕಿರಣ್, ಉಪಾಧ್ಯಕ್ಷ ರಾಜೇಶ್ ಜತ್ತನ್, ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ನಾರಾಯಣ್ ಆಚಾರ್ಯ, ವಿಲ್ಸನ್ ಅಂಚನ್, ಕೆ. ಪ್ರಭಾಕರ್, ಮಹೇಶ್, ನವೀನ್ ಉದ್ಯಾವರ ಉಪಸ್ಥಿತರಿದ್ದರು.