ವಿದ್ಯಾರ್ಥಿನಿಯ ಬದುಕಿಗೆ ಸೂರು ಕಟ್ಟಿಕೊಟ್ಟ ಮಾಸ್ಟರ್
ಉಡುಪಿ(ಉಡುಪಿ ಟೈಮ್ಸ್ ವರದಿ): ಒಂದು ಸಲ ನಿವೃತ್ತಿಯಾದರೆ ಸಾಕು, ಕಾರು ಮನೆ ತೆಗೆದುಗೊಂಡು ಆರಾಮವಾಗಿ ಬದುಕಬೇಕು ಎಂದು ಭಾವಿಸುವವರೇ ಹಲವರು. ಆದರೆ ಇಲ್ಲೊಬ್ಬ ಶಿಕ್ಷಕ ಇದಕ್ಕೆಲ್ಲ ತದ್ವಿರುದ್ದವಾಗಿದ್ದರೆ.
ಹಿಂದೆ ಗುರು ಮುಂದೆ ಗುರಿ ಇದ್ದಾಗ ಮಕ್ಕಳ ಭವಿಷ್ಯ ಉಜ್ವಲ ಎಂಬ ಮಾತಿಗೆ ಪೂರಕವೆಂಬಂತೆ, ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಉಡುಪಿಯ ನಿಟ್ಟೂರು ಹೈಸ್ಕೂಲಿನ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರು ಉದಾಹರಣೆ. ಇವರು ನವೆಂಬರ್ 1ಕ್ಕೆ ನಿವೃತ್ತಿ ಆಗಿದ್ದು ಸುದೀರ್ಘ 37 ವರ್ಷ ಶಿಕ್ಷಣ ಸೇವೆ ಸಲ್ಲಿಸಿದ್ದಾರೆ. ನಂತರ ಇವರು ಮಾಡಿದ ಸೇವೆ ಜನ ಮೆಚ್ಚುವಂತೆ ಮಾಡಿದೆ.
ಸರ್ಕಾರದಿಂದ ಬಂದ ಮೊತ್ತದಲ್ಲಿ ತನ್ನದೇ ಶಾಲೆಯ ಕೊರಗ ಸಮುದಾಯದ ಬಡ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಸೋರುತ್ತಿದ್ದ ಸೂರಿಗೆ ಮುಕ್ತಿ ಸಿಕ್ಕಿದ್ದೇ, ನಯನಾ ಕುಟುಂಬಕ್ಕೆ ಸಂತಸ ಸಿಕ್ಕಿದೆ. ಗುಡಿಸಲು ಮಾದರಿಯ ಮನೆಯಲ್ಲಿದ್ದ ನಯನಾಳಿಗೆ ಹೊಸ ಭದ್ರ ಸೂರನ್ನು ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ದೀಪ ಬೆಳಗಿಸಿ ಹಸ್ತಾಂತರಿಸಿದರು.
ಮುಖ್ಯೋಪಾಧ್ಯಾರು ಕರ್ತವ್ಯ ನಿರ್ವಹಿಸಿದ ಶಾಲಾ ಮಕ್ಕಳ ಕುಟುಂಬದ ಆರ್ಥಿಕ ಸ್ಥಿತಿ, ಮನೆಯ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕೊಡಿಸುತ್ತಾರೆ.
“ನಮ್ಮ ಮನೆ ಮಳೆಗಾಲದಲ್ಲಿ ಸೋರುತ್ತಿತ್ತು. ಮನೆಯಲ್ಲಿ ಏಳು ಜನ ಇರುವುದು ಬಹಳ ಕಷ್ಟವಾಗಿತ್ತು. ನಮ್ಮ ಕಷ್ಟ ಅರಿತು ಮನೆ ಕಟ್ಟಿಕೊಟ್ಟಿದ್ದಾರೆ. ನಾನು ಚೆನ್ನಾಗಿ ಕಲಿತು ಶಾಲೆಗೂ ಮುರಳಿ ಸರ್ ಗೂ ಹೆಸರು ತಂದು ಕೊಡುತ್ತೇನೆ“ಎಂದು ಆನಂದಭಾಷ್ಪದೊಂದಿಗೆ ನಯನ ನುಡಿಯುತ್ತಾಳೆ. ಮುರಳಿ ಕಡೇಕಾರು ಹಲವರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಶಾಲೆಯಲ್ಲಿ ಮೊದಲು ಬಿಸಿಯೂಟ, ಉಚಿತ ಗ್ಯಾಸ್, ವಿದ್ಯುತ್, ಸ್ಕಾಲರ್ಶಿಪ್, ಉಳಿತಾಯ ಖಾತೆ, ಮನೆ, ವಿದ್ಯೆ, ಉದ್ಯೋಗ ಹೀಗೆ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು.
“ನನ್ನದು ನೆಮ್ಮದಿಯ ನಿವೃತ್ತಿ. ಅನುದಾನಿತ ಶಾಲೆಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ ಎಂಬುವುದು ನನಗೆ ಹೆಮ್ಮೆ. ಬಡಮಕ್ಕಳ ಕಷ್ಟ ಏನು ಎಂದು ಅರಿಯಲು, ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಶಿಕ್ಷಕನಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುವ ಅವಕಾಶ ಇದೆ. ಮಕ್ಕಳ ಪೋಷಕರ ಊರವರ ಪ್ರೀತ ಗಳಿಸುವ ಅವಕಾಶ ಒಂದಿದ್ದರೆ ಅದು ಶಿಕ್ಷಕರಿಗೆ ಮಾತ್ರ ಇದೆ” ಎನ್ನುತ್ತಾರೆ ಮುರಳಿ ಕಡೆಕಾರ್.
ಈ ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು, ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ದೂರವಾಣಿ ಮುಖಾಂತರ ಪ್ರಶಂಸೆ ವ್ಯಕ್ತಪಡಿಸಿ ಮುಖ್ಯೋಪಾಧ್ಯ ಮುರಳಿ ಕಡೆಕಾರ್ ಗೆ ಅಭಿನಂದಿಸಿದ್ದಾರೆ.