ಕಾರಂತ ಪುರಸ್ಕಾರ – 2024 ಪ್ರಶಸ್ತಿ- ಕಾದಂಬರಿಕಾರ ಡಾ. ನಾ.ಮೊಗಸಾಲೆ ಆಯ್ಕೆ
ಕುಂದಾಪುರ ಸೆ.17 (ಉಡುಪಿ ಟೈಮ್ಸ್ ವರದಿ): ಗೆಳೆಯರ ಬಳಗ ಕಾರ್ಕಡ ಸಾಲಿಗ್ರಾಮ ಇದರ ವತಿಯಿಂದ ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ವರ್ಷ ನೀಡಲಾಗುವ ಗೆಳೆಯರ ಬಳಗ , ಕಾರಂತ ಪುರಸ್ಕಾರ – 2024 ಪ್ರಶಸ್ತಿಗೆ ಈ ಬಾರಿ ಹಿರಿಯ ಸಾಹಿತಿ, ಸಂಘಟಕ, ಕವಿ , ಕಾದಂಬರಿಕಾರ, ಸಾಂಸ್ಕೃತಿಕ ಚಿಂತಕ, ಡಾ. ನಾ. ಮೊಗಸಾಲೆ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ ಅವರು, ಗೆಳೆಯರ ಬಳಗ ಕಾರಂತ ಪುರಸ್ಕಾರ-2024 ಕಾರ್ಯಕ್ರಮ ಅ.19 ರಂದು ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲಪುಷ್ಪ, ಶಾಲು ಇತ್ಯಾದಿಯನ್ನು ಒಳಗೊಂಡಿರುತ್ತದೆ.
ಅತ್ಯಂತ ಗ್ರಾಮೀಣ ಪ್ರದೇಶವಾದ ಕಾಂತಾವರದಲ್ಲಿ ಕನ್ನಡ ಸಂಘ ಸ್ಥಾಪಿಸಿ ನಿರಂತರ ಚಟುವಟಿಕೆಯ ಮೂಲಕ ವಿಶ್ವ ಭೂಪಟದಲ್ಲಿ ಕಾಂತಾವರವನ್ನು ಗುರುತಿಸುವಂತೆ ಮಾಡಿದ ಡಾ. ಮೊಗಸಾಲೆಯವರ ಸಾಧನೆ ಅನನ್ಯವಾದುದು. ಕಾರಂತರಂತೆ ಸಂಘಟನೆ, ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾದಂಬರಿಕಾರರಾಗಿ, ಕಥೆಗಾರರಾಗಿ ಕವಿಯಾಗಿ, ಮೊಗಸಾಲೆ ಯವರ ಸಾಧನೆ ಬೆಲೆಕಟ್ಟಲಾಗದು.
ಈ ಹಿಂದೆ ಮಾಲಿನಿ ಮಲ್ಯ, ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್, ಶ್ರೀನಿವಾಸ ಸಾಸ್ತಾನ, ಹಿರಿಯಡ್ಕ ಗೋಪಾಲರಾವ್, ಎಚ್. ಇಬ್ರಾಹಿಂ ಸಾಹೇಬ್, ಪಾಂಡೇಶ್ವರ ಚಂದ್ರಶೇಖರ ಚಡಗ, ಬನ್ನಂಜೆ ಸಂಜೀವ ಸುವರ್ಣ, ವೈದೇಹಿ ಕಾರಂತ ಪುರಸ್ಕಾರ ಪಡೆದ್ದಾರೆ.