ಕಾಪು: “ಆಸ್ಕರಣ್ಣನ ನೆನಪು”- ಶಾಲಾ ಮಕ್ಕಳಿಗೆ ಟೈ ವಿತರಣೆ
ಕಾಪು ಸೆ. 14 : ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಸಂಚಲನಾ ಸಮಿತಿಯ ವತಿಯಿಂದ ರಾಜ್ಯ ಸಮಿತಿಯ ಸದಸ್ಯರಾದ ರೊನಾಲ್ಡ್ ಮನೋಹರ್ ರವರ ನೇತೃತ್ವದಲ್ಲಿ ಕಾಪುವಿನ ಮೂಡಬೆಟ್ಟು ಗ್ರಾಮದ ಶಂಕರಪುರದಲ್ಲಿರುವ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಆಸ್ಕರಣ್ಣನ ನೆನಪು” ಶೀರ್ಷಿಕೆಯಡಿಯಲ್ಲಿ, ಶಾಲಾ ಮಕ್ಕಳಿಗೆ ಕೊರಳ ಪಟ್ಟಿ (TIE) ವಿತರಿಸುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೆ ಪಿ ಸಿ ಸಿ ಉಪಾಧ್ಯಕ್ಷರಾದ ಎಂ. ಎ. ಗಫೂರ್ ಅವರು ಮಾತನಾಡಿ, ದಿವಂಗತ ಆಸ್ಕರ್ ಫೆರ್ನಾಂಡಿಸ್ ರವರ ಸೇವಾ ಮನೋಭಾವದ ವ್ಯಕ್ತಿತ್ವ, ಅಭಿವೃದ್ಧಿ ಕಾರ್ಯಗಳು, ರಾಜಕೀಯಕ್ಕಾಗಿ ಅವರು ಮಾಡಿದ ತ್ಯಾಗಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಯಾವುದೇ ಪ್ರಚಾರ ಪ್ರಿಯರಲ್ಲದ ಆಸ್ಕರ್ ಫೆರ್ನಾಂಡಿಸ್ ರವರು ವ್ಯಕ್ತಿ ಅಲ್ಲ, ಸಮಾಜದ ಶಕ್ತಿ ಎಂದು ಹೇಳಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿಯ ಸದಸ್ಯರಾದ ರೊನಾಲ್ಡ್ ಮನೋಹರ್ ರವರು ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ರವರು ಕೇಂದ್ರ ಸಚಿವರಾಗಿದ್ದಾಗ ಮಧ್ಯರಾತ್ರಿವರೆಗೂ ತನ್ನ ಕಚೇರಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದರು, ಅವರ ನಿಸ್ವಾರ್ಥ ಸೇವೆಯೇ ನನ್ನ ಸಾಮಾಜಿಕ ಕಾರ್ಯಗಳಿಗೆ ಸ್ಫೂರ್ತಿ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜಾ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸೈಂಟ್ ಜೋನ್ಸ್ ಚರ್ಚ್ ಪಾಂಗಾಳ ಇದರ ಉಪಾಧ್ಯಕ್ಷರಾದ ಜೋನ್ ಮಾರ್ಟಿಸ್, ಮಾನವ ಬಂಧುತ್ವ ವೇದಿಕೆ ದ. ಕ., ಉಡುಪಿ, ಉ. ಕ. ಜಿಲ್ಲೆಗಳ ಪ್ರಾಂತೀಯ ಸಂಚಾಲಕ ಕೆ ಎಸ್ ಸತೀಶ್, ಶಾಲಾ ಸಹ ಶಿಕ್ಷಕಿಯಾದ ಮರಿಯಾ ಅನಿತಾ ಮೆಂಡೋನ್ಸಾ, ವಂದನಾರ ಮಾನವ ಬಂಧುತ್ವ ವೇದಿಕೆ ಕಾಪು ತಾಲ್ಲೂಕಿನ ಸಂಚಾಲಕರಾದ ದಿನೇಶ್, ಉಡುಪಿ ಜಿಲ್ಲಾ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಬಿ ಶ್ರೀಧರ್, ಮಹಿಳಾ ಘಟಕದ ಸಂಚಾಲಕಿ ಶಾಂತಿ ಪಿರೇರಾ, ಚಾರ್ಲ್ಸ್ ಅಂಭೀರ್, ಅನಿತಾ ಡಿಸೋಜಾ, ಆಶೋಕ್ ಸುವರ್ಣ, ಕ್ಷೇವಿಯರ್ ಮುಳ್ಳೂರು, ವಿಲ್ಸನ್, ಡಾ. ದೀಕ್ಷಾ, ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಮಂಗಳಾ ಬಸವರಾಜು ಹಾಗೂ ಸದಸ್ಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.