ಕಾರ್ಕಳ: ಥೀಮ್ ಪಾರ್ಕ್ ಪರಶುರಾಮನ ಮೂರ್ತಿ ಶಿಲ್ಪಿಯಿಂದ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಹಣ ಆರೋಪ – ತನಿಖೆಗೆ ಆಗ್ರಹ
ಕಾರ್ಕಳ ಸೆ.11(ಉಡುಪಿ ಟೈಮ್ಸ್ ವರದಿ): ತಾಲೂಕಿನ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ತಯಾರಿಸಿದ ಕ್ರಿಶ್ ಆರ್ಟ್ ವರ್ಲ್ಡ್‌ನ ಕೃಷ್ಣ ನಾಯಕ್ ರವರ ಖಾತೆಯಿಂದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಣ ಪಡೆದ ಬಗ್ಗೆ ತನಿಖೆ ನಡೆಸುವಂತೆ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಕೃಷ್ಣ ಮೂರ್ತಿ ಆಚಾರ್ಯ ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಕಾರ್ಕಳ ತಾಲೂಕಿನ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ತೆರಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ವಿರುದ್ಧ ಮಾನ್ಯ ಉಚ್ಛ ನ್ಯಾಯಾಲಯದ ಅರ್ಜಿದಾರರು ಹಾಗೂ ಆರೋಪಿತನಾದ ಕೃಷ್ಣ ನಾಯಕ್ ರವರು ದಾಖಲು ಮಾಡಿರುವ ದಾವೆ CRL.P 6159/24 ರಲ್ಲಿ ವಾದ ಮಾಡುವ ಸಂಧರ್ಭದಲ್ಲಿ ಮೂಲ ದೂರುದಾರರು ಹಾಗೂ ಉಚ್ಛ ನ್ಯಾಯಾಲಯದಲ್ಲಿ ಪ್ರತಿವಾದಿಯಾದ ನಲ್ಲೂರು ಕೃಷ್ಣ ಶೆಟ್ಟಿಯವರ ವಕೀಲರಾದ ಕೆ ವಿ ಶ್ರೀಕಾಂತ್ ರವರು ದಾಖಲೆ ಸಮೇತ ಮಾನ್ಯ ನ್ಯಾಯಾಧೀಶರಿಗೆ ಶಿಲ್ಪಿ ಕೃಷ್ಣ ನಾಯಕ್ ರವರ ಬ್ಯಾಂಕ್ ಖಾತೆಯಿಂದ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಖಾತೆಗೆ ಹಣ ಪಡೆದ ಬಗ್ಗೆ ಕಾರ್ಕಳ ಪೊಲೀಸರ ವಶದಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.